ದೇಶದ ಭವಿಷ್ಯ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಅಗಾಧ

ದಾವಣಗೆರೆ.ನ.೧೮: ಇಂದಿನ ಮಕ್ಕಳೇ ಇಂದಿನ ಪ್ರಜೆಗಳು. ಮಕ್ಕಳು ದೇಶದ ಭವಿಷ್ಯ. ಮುಂಬರುವ ದಿನಗಳಲ್ಲಿ ಮಕ್ಕಳು ದೇಶದ ವಿವಿಧ ಸ್ತರದಲ್ಲಿ ಕೆಲಸ ಮಾಡುವ ಜತೆಗೆ ರಾಷ್ಟ್ರವನ್ನು ಮುನ್ನಡೆಸುವ ವ್ಯಕ್ತಿಗಳು ಅಗಬಹುದು ಎಂದು ಎಫ್.ಟಿ.ಎಸ್.ಸಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಶ್ರೀಪಾದ ಹೇಳಿದರು.ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಡಿ.ಆರ್.ಆರ್ ವಿದ್ಯಾಸಂಸ್ಥೆ ದಾವಣಗೆರೆ ಸಹಯೋಗದಲ್ಲಿ ನಗರದ ಡಿ.ಆರ್.ಆರ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ   ಮಕ್ಕಳ ಹಕ್ಕುಗಳ ಮಾಸಾಚರಣೆ ಅಂಗವಾಗಿ  ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದ ಜನಸಂಖ್ಯೆಯಲ್ಲಿ ಶೇ.40ರಷ್ಟು ಮಕ್ಕಳಿದ್ದಾರೆ. ದೇಶದ ಭವಿಷ್ಯ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಅಗಾಧ. ಅದರೆ ಮಕ್ಕಳಿಗೆ ಇಡಲಾಗಿರುವ ಅನುದಾನ ತೀರಾ ಕಡಿಮೆ. ಕಾರಣ ಸರ್ಕಾರಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು.   ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ವಿವಿಧ ಸ್ತರಗಳಲ್ಲಿ ದೌರ್ಜನ್ಯ ನಡೆಯುತ್ತಿದ್ದು ಅದಕ್ಕಾಗಿ ಪೋಕ್ಸೋ ಕಾನೂನನ್ನು ಜಾರಿಗೆ ತರಲಾಗಿದೆ. ಅಲ್ಲದೇ ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನು ಮಾಡಲಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಪ್ರವೀಣನಾಯಕ ಮಾತನಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖ. ಈ ನಿಟ್ಟಿನಲ್ಲಿ ಮಾಧ್ಯಮವೂ ಕೂಡ ಉತ್ತಮ ರೀತಿಯಲ್ಲಿ ಸುದ್ದಿಗಳನ್ನು ಬಿತ್ತರಿಸಬೇಕಿದೆ. ಇಲ್ಲವಾದರೆ ಅದನ್ನೇ ಸಮಾಜ ನಂಬಲಿದೆ ಎಂದು ಹೇಳಿದರು. ಡಿ.ಆರ್.ಆರ್ ವಿದ್ಯಾಸಂಸ್ಥೆಯ ಟ್ರಸ್ಟಿ ಸ್ವಾತಿ ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್ ಕುಮಾರ್, ಪ್ಯಾನಲ್ ವಕೀಲೆ ಟಿ.ಎಂ.ಅನ್ನಪೂರ್ಣ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಡಿಸಿಎಂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆರ್.ಭೋಜರಾಜ್ ಯಾದವ್, ಎಂ.ಎಂ.ಬಸವನಗೌಡ, ಹೆಚ್.ಎಸ್.ಹಾಲೇಶ್, ಕೆ.ಎಸ್.ರಾಧಾ ಇತರರು ಇದ್ದರು.