ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಲಸಿಕೆಗೆ ಕಾಂಗ್ರೆಸ್ ಒತ್ತಾಯ

ರಾಯಚೂರು.ಜೂ.೦೪- ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಾರ್ವತ್ರಿಕವಾಗಿ ಪ್ರತಿ ನಿತ್ಯ ಒಂದು ಕೋಟಿ ಉಚಿತ ವ್ಯಾಕ್ಸಿನೇಷನ್ ನೀಡಲು ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ -೧೯ ಅಭೂತಪೂರ್ವ ವಿನಾಶ ಮತ್ತು ಪ್ರತಿ ಭಾರತೀಯ ಕುಟುಂಬಕ್ಕೂ ಅಗಾಧ ನೋವುಂಟು ಮಾಡಿದೆ. ದುರಂತವೆಂದರೆ ಪ್ರಧಾನ ಮಂತ್ರಿಯವರು ಕೊರೊನಾದ ವಿರುದ್ಧ ಹೋರಾಡುವ ತನ್ನ ಕರ್ತವ್ಯವನ್ನು ಸಂಪೂರ್ಣ ನಿರ್ಲಕ್ಷ್ಯಿಸಿ, ಜನರನ್ನು ತ್ಯಜಿಸಿ, ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ನಿಂತಿದ್ದಾರೆ. ಕೋವಿಡ್ -೧೯ ರ ಕ್ರಿಮಿನಲ್ ದುರುಪಯೋಗಕ್ಕೆ ಕೇಂದ್ರ ಬಿಜೆಪಿ ಹೊಣೆ. ಕೋವಿಡ್ -೧೯ ಸಾಂಕ್ರಾಮಿಕದ ಮಧ್ಯೆ ವ್ಯಾಕ್ಸಿನೇಷನ್ ಮಾತ್ರ ರಕ್ಷಣೆಯಾಗಿದೆ.
ಮೋದಿ ಸರ್ಕಾರ ಅವರ ವ್ಯಾಕ್ಸಿನೇಷನ್ ಕಾಕ್‌ಟೈಲ್ ತಂತ್ರವು ಅಪಾಯಕಾರಿಯಾಗಿದೆ. ಅನ್ಯ ದೇಶಗಳು ೨೦೨೦ ಮೇ ತಿಂಗಳಲ್ಲಿ ಲಸಿಕೆ ಖರೀದಿ ಆದೇಶ ನೀಡಿದರೇ, ಬಿಜೆಪಿ ಮೋದಿ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಜನವರಿ ೨೧ ರಂದು ಮೊದಲು ಲಸಿಕೆಗೆ ಆದೇಶ ನೀಡಿರುವುದು ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ. ದೇಶದಲ್ಲಿ ೧೪೦ ಕೋಟಿ ಜನರಿದ್ದರೇ, ಇಲ್ಲಿವರೆಗೆ ಕೇವಲ ೩೯ ಕೋಟಿ ಲಸಿಕೆಗಳನ್ನು ಮಾತ್ರ ಹಾಕಲಾಗಿದೆ. ಸರ್ಕಾರವೇ ಹೇಳುವಂತೆ ಇಲ್ಲಿವರೆಗೂ ೨೧ ಕೋಟಿ ಲಸಿಕೆ ಹಾಕಲಾಗಿದೆ. ಕೇವಲ ೪ ಕೋಟಿ ಜನ ಎರಡು ಲಸಿಕೆಗಳನ್ನು ಪಡೆದಿದ್ದಾರೆ.
ದೇಶದ ಒಟ್ಟು ಜನಸಂಖ್ಯೆಗೆ ಲಸಿಕೆ ಹಾಕಲು ಎಷ್ಟು ದಿನ ಬೇಕಾಗುತ್ತದೆ. ಈಗೀರುವ ಪರಿಸ್ಥಿತಿ ಅಂದಾಜಿಸಿದರೇ, ಮೂರು ವರ್ಷವಾದರೂ ಈ ಲಸಿಕಾ ವ್ಯವಸ್ಥೆ ಪೂರ್ಣಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಒಂದು ಕೋಟಿ ಜನರಿಗೆ ಉಚಿತ ಲಸಿಕೆ ಹಾಕುವಂತಹ ವ್ಯವಸ್ಥೆ ಕೇಂದ್ರ ಸರ್ಕಾರ ಮಾಡಬೇಕಾಗಿದೆ. ಡಿಸೆಂಬರ್ ೩೧ ರೊಳಗೆ ೧೮ ವರ್ಷ ಮೇಲ್ಪಟ್ಟ ಎಲ್ಲಾರಿಗೂ ಲಸಿಕೆ ಹಾಕುವಂತ ಭರವಸೆ ನೀಡಬೇಕಾಗಿದೆ. ಲಸಿಕೆಯ ದರ ದುಬಾರಿಯಾಗಿರುವುದು ಅತ್ಯಂತ ಖಂಡನೀಯವಾಗಿದೆ.
ಪ್ರತಿ ಡೋಸ್‌ಗೆ ೧೫೦ ರೂ.ಗೆ ಉತ್ಪಾದನಾ ಕಂಪನಿ ಮಾರಾಟ ಮಾಡಿದರೇ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹೀಗೆ ವಿವಿಧ ಹಂತಗಳಲ್ಲಿ ದರ ಹೆಚ್ಚಳ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದು ಸಾರ್ವಜನಿಕರಿಗೆ ಅತ್ಯಂತ ಸಮಸ್ಯೆಯಾಗಿದೆ. ಈ ಬಗ್ಗೆಯೂ ರಾಷ್ಟ್ರಪತಿಗಳು ಗಮನ ಹರಿಸಿ, ಜನರಿಗೆ ಕೊರೊನಾ ಲಸಿಕೆ ಲಭ್ಯವಾಗುವಂತೆ ನಿಗಾವಹಿಸಲು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ತು ಸದಸ್ಯ ಎನ್.ಎಸ್.ಬೋಸರಾಜು, ಜಿಲ್ಲಾಧ್ಯಕ್ಷ ಬಿ.ವಿ.ನಾಯಕ್, ಶಾಸಕ ಬಸನಗೌಡ ದದ್ದಲ್, ಜಿ.ಬಸವರಾಜ ರೆಡ್ಡಿ, ಕೆ.ಶಾಂತಪ್ಪ, ಎ.ವಸಂತ ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.