ದೇಶದ ಪ್ರಗತಿಯಲ್ಲಿ ವಿಜ್ಞಾನ ಸಂವಹನ ಮಹತ್ವದ ಪಾತ್ರ:ಪ್ರೊ. ಬಿ.ಕೆ. ತುಳಸಿಮಾಲ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.1:ದೇಶದ ಪ್ರಗತಿಯಲ್ಲಿ ವಿಜ್ಞಾನ ಸಂವಹನ ಮಹತ್ತರ ಪಾತ್ರ ನಿರ್ವಹಿಸುತ್ತದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲ ಹೇಳಿದರು.
ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಶನ್ ವಿಜಯಪುರ ಘಟಕ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನ ಸಂವಹನ’ ಕುರಿತ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುಗದಲ್ಲಿ ವಿಜ್ಞಾನ ಸಂವಹನ ಅತ್ಯವಶ್ಯಕವಾದ ವಿಷಯವಾಗಿದೆ. ಇದನ್ನು ನಮ್ಮ ಮಕ್ಕಳಿಗೆ ಅರ್ಥೈಯಿಸಬೇಕಾದ ಅವಶ್ಯಕತೆ ಇದೆ. ವೈಜ್ಞಾನಿಕ ವಿಷಯದ ಬಗ್ಗೆ ಸರಿಯಾಗಿ ಗ್ರಹಿಸಿ ಅದನ್ನು ತಿಳಿದುಕೊಳ್ಳಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ವೈಜ್ಞಾನಿಕ ಕ್ಷೇತ್ರದಲ್ಲಿ ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂದರೆ ಇಂಗ್ಲೀಷ ಭಾಷಾ ಕೌಶಲ ಬಹಳ ಅತ್ಯವಶ್ಯಕ. ಏಕೆಂದರೆ ಮಾತೃ ಭಾಷೆಯಲ್ಲಿ ಅನೇಕ ಸಂಶೋಧನೆಗಳು ನಡೆದರೂ ಅವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಭಾಷೆಯ ಬಳಕೆ ಪ್ರಮುಖವಾಗಿದೆ. ನಮ್ಮ ಮಾತೃ ಭಾಷೆಯಲ್ಲಿ ವಿಜ್ಞಾನವನ್ನು ಗ್ರಹಿಸಬಹುದು. ಆದರೆ ಅದನ್ನು ಜಗತ್ತಿಗೆ ಪರಿಚಯಿಸಬೇಕೆಂದರೆ ನಮಗೆ ಇಂಗ್ಲಿಷ ಭಾಷೆ ಅನಿವಾರ್ಯ ಎಂದರು.
ಸಮೂಹ ಮಾಧ್ಯಮಗಳಲ್ಲಿ ವಿಜ್ಞಾನದ ಕುರಿತು ಸುದ್ದಿ ಮಾಡುವುದು ಸುಲಭದ ಮಾತಲ್ಲ. ವರದಿ ಮಾಡುವವರು ಬಹಳ ಜಾಗೂರಕತೆಯಿಂದ ಎಲ್ಲ ವಿಷಯವನ್ನು ಅರಿತುಕೊಂಡು ವರದಿ ಮಾಡಬೇಕಾಗುತ್ತದೆ. ವಿಜ್ಞಾನದ ಕುರಿತು ಪ್ರಾದೇಶಿಕ ಭಾಷೆಗಳಲ್ಲಿ ತಿಳಿಸುವುದು ಒಂದು ಸವಾಲಿನ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ಇಂದಿನ ದಿನಮಾನದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವಿಜ್ಞಾನ ಬರವಣಿಗೆ ಮಾಡುವವರು ಬೆರಳೆಣಿಕೆಯಷ್ಟು ಜನರಿದ್ದಾರೆ. ವಿಜ್ಞಾನ ಪದವೀಧರರು ಬರವಣಿಗೆಯ ಕೌಶಲಗಳನ್ನು ಕರಗತ ಮಾಡಿಕೊಳ್ಳುವ ಮೂಲಕ ವಿಜ್ಞಾನ ಬರವಣಿಗೆ ಮಾಡಲು ಸಾಕಷ್ಟು ಅವಕಾಶಗಳಿವೆ. ಈ ಅವಕಾಶಗಳನ್ನು ವಿದ್ಯಾರ್ಥಿನಿಯರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲೀಷ್‍ನಲ್ಲಿ ಪರಿಣಿತಿಯನ್ನು ಹೊಂದಿದರೆ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಲಹೆ ನೀಡಿದ ಅವರು, ವಿಜ್ಞಾನ ಮೆದುಳಿಗೆ ಸಂಬಂಧÀಪಟ್ಟ ವಿಷಯವಾದರೆ ಬರವಣಿಗೆ ಹೃದಯಕ್ಕೆ ಸಂಬಂಧಿಸಿದೆ. ಈ ಎರಡನ್ನೂ ಬೆಸೆಯುವುದೇ ವಿಜ್ಞಾನ ಪತ್ರಿಕೋದ್ಯಮ ಎಂದರು.
ವಿಚಾರ ಸಂಕಿರಣದ ತಾಂತ್ರಿಕ ಗೋಷ್ಠಿಗಳಲ್ಲಿ ವಿಜ್ಞಾನ ಬರಹಗಾರ ಶ್ರೀರಾಮ ಭಟ್ಟ ಹಾಗೂ ಹುನುಗುಂದದ ವಿಜ್ಞಾನ ಶಿಕ್ಷಕ ರಮೇಶ ಬಳ್ಳ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ಬಾಬು ಲಮಾಣಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ನಿಗಾರ ಸುಲ್ತಾನಾ ವಂದಿಸಿದರು.