ದೇಶದ ಪ್ರಗತಿಗೆ ಸಹಕಾರಿ ಕ್ಷೇತ್ರ ಪೂರಕ

ತುಮಕೂರು, ನ. ೨೪- ದೇಶದ ಸರ್ವಾಂಗೀಣ ಪ್ರಗತಿಯಲ್ಲಿ ಸಹಕಾರ ಕ್ಷೇತ್ರ ಮಹತ್ತರ ಪಾತ್ರ ವಹಿಸುತ್ತಿದ್ದು, ಸಮುದಾಯದ ಹಿತವನ್ನು ಕಾಪಾಡುವ ಅತ್ಯಂತ ದೊಡ್ಡ ಶಕ್ತಿಯಾಗಿ ರೂಪುಗೊಂಡಿದೆ ಎಂದು ಆಡಿಟರ್ ಕೆ. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ನಗರದ ಶಾರದಾ-ಶಂಕರ ಮಹಿಳಾ ಮಂಡಲಿ ವತಿಯಿಂದ ಏರ್ಪಟ್ಟಿದ್ದ ಸಮಾರಂಭದಲ್ಲಿ ರಾಜ್ಯ ಸರ್ಕಾರದಿಂದ “ಸಹಕಾರ ರತ್ನ” ಪ್ರಶಸ್ತಿ ಪುರಸ್ಕೃತರಾದ ತುಮಕೂರಿನ ಶಾಲಿನಿ ರವಿಶಂಕರ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದರ ಜತೆಗೆ ಸಹಕಾರ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಶಾಲಿನಿ ರವರಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಿರುವುದು ಅರ್ಹರಿಗೆ ಸಂದ ಗೌರವವಾಗಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾರದಾ ಶಂಕರ ಮಹಿಳಾ ಮಂಡಲಿ ಅಧ್ಯಕ್ಷೆ ಇಂದಿರಮ್ಮ ಸುಂದರರಾವ್ ಮಾತನಾಡಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತೆ ಶಾಲಿನಿ ಇನ್ನೂ ಹೆಚ್ಚು ಯಶಸ್ಸು ಸಾಧಿಸುವಂತಾಗಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ೫೦ ಕ್ಕೂ ಹೆಚ್ಚು ಮಹಿಳಾ ಮಂಡಲಿ ಸದಸ್ಯರಿಂದ ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಸೌಂದರ್ಯಲಹರಿ ಹಾಗೂ ಅಷ್ಟಲಕ್ಷ್ಮೀ ಸ್ತೋತ್ರದ ಪಾರಾಯಣ ನಡೆಯಿತು. ನಿವೃತ್ತ ಪ್ರಾಚಾರ್ಯ
ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನಿಯರ್ ಕೆ.ವಿ.ರವಿಶಂಕರ್, ಮಹಿಳಾ ಮಂಡಲಿ ಕಾರ್ಯದರ್ಶಿ ಸೌಮ್ಯರವಿ, ಜಿಲ್ಲಾ ಬ್ರಾಹ್ಮಣ ಸಭಾದ ಮಹಿಳಾ ಘಟಕದ ಅಧ್ಯಕ್ಷೆ ಸುಭಾಶಿನಿ ರವಿಶಂಕರ್, ಸಮುದಾಯದ ಮುಖಂಡರಾದ ಸತೀಶ್‌ಚಂದ್ರ, ರವೀಂದ್ರ, ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಜಿ.ಕೆ.ಗುಂಡಣ್ಣ ಸ್ವಾಗತಿಸಿದರು.