ದೇಶದ ಪ್ರಗತಿಗೆ ಮಹಿಳೆಯ ಕೊಡುಗೆ ಅಪ್ರತಿಮ

ಲಕ್ಷ್ಮೇಶ್ವರ,ಮಾ10: ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲಳು ಎಂಬಂತೆ ಮಹಿಳೆಯು ಕುಟುಂಬದ ಪ್ರಗತಿಗಷ್ಟೇ ಅಲ್ಲದೇ ಇಂದು ಎಲ್ಲ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ, ಸೇವೆಯ ಮೂಲಕ ದೇಶದ ಪ್ರಗತಿಗೂ ಕಾರಣಳಾಗಿದ್ದಾಳೆ. ಮಹಿಳೆಯರನ್ನು ಪೂಜ್ಯನೀಯ, ಗೌರವ ಮತ್ತು ಸಮಾನತೆ ಭಾವನೆಯಿಂದ ಕಾಣಬೇಕು ಹರಿಹರ ಪಂಚಮಸಾಲಿ ಪೀಠದ ಶಾಖಾಮಠ ಹಗರಿಬೊಮ್ಮನಹಳ್ಳಿಯ ಮಹಾಂತಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಮತ್ತು ಸೃಜನ ಬಳಗದಿಂದ ಪಟ್ಟಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಆದರ್ಶ ದಂಪತಿಗಳ ಸ್ಪರ್ಧೆ” ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಸತ್ಯವನ್ನರಿತು ಪ್ರತಿಯೊಬ್ಬರೂ ಮಹಿಳೆಯರನ್ನೂ ಪೂಜ್ಯನೀಯ ಭಾವನೆಯಿಂದ ಕಾಣಬೇಕು. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವಂತೆ ತಾಯಂದಿರು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಮೌಲ್ಯ, ದೇವರು, ಧರ್ಮ, ಗುರು ಹಿರಿಯರ ಬಗ್ಗೆ ಗೌರವ ಭಾವನೆ ಮೂಡಿಸಬೇಕು ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ರಶ್ಮಿ ನಾಗರಾಜ ಕುಂಕೋದ ಮಾತನಾಡಿ, ಹೆಣ್ಣು ಮಕ್ಕಳು ಹೆಚ್ಚು ಸಾಕ್ಷರರಾಗುವ ಮೂಲಕ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಯಾಗಿ ಬಾಳುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯ ಉಪಾಧ್ಯಕ್ಷೆ ವಸಂತಾ ಹುಲ್ಲತ್ತಿ, ಪುರಸಭೆ ಅಧ್ಯಕ್ಷೆ ಜಯಮ್ಮ ಅಂದಲಗಿ, ಉಪಾಧ್ಯಕ್ಷೆ ಪೂಜಾ ಖರಾಟೆ, ಅನ್ನಪೂರ್ಣ ಮಹಾಂತಶೆಟ್ಟರ, ವಿಜಯಕುಮಾರ ಮಹಾಂತಶೆಟ್ಟರ, ಡಿ.ಎಚ್ ಪಾಟೀಲ, ಎಸ್.ಎಫ್ ಆದಿ, ಮಲ್ಲಿಕಾರ್ಜುನ ನೀರಾಲೋಟಿ, ಡಾ. ದೀಪಾ ಬಿಂಕದಕಟ್ಟಿ, ಡಾ. ಜಯಶ್ರೀ ಹೊಸಮನಿ, ಜಯಕ್ಕ ಕಳ್ಳಿ, ಪೂರ್ಣಿಮಾ ಪಾಟೀಲ, ಸಮಾಜದ ತಾಲೂಕಾ ಅಧ್ಯಕ್ಷ ಮಂಜನಾಥ ಮಾಗಡಿ ಸೇರಿ ತಾಲೂಕಾ ಘಟಕ, ಗ್ರಾಮ ಘಟಕ, ವಾರ್ಡ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಆದರ್ಶ ದಂಪತಿಗಳು ಸ್ಫರ್ಧೆಯಲ್ಲಿ ಅಪ್ಪುಗೌಡ ಜಕ್ಕನಗೌಡ ದಂಪತಿಗಳು(ಪ್ರಥಮ), ಬಸವರಾಜ ನೀಲಣ್ಣವರ (ದ್ವಿತೀಯ) ಪರಮೇಶ ಅಡರಕಟ್ಟಿ ದಂಪತಿಗಳು(ತೃತೀಯ ಸ್ಥಾನ ಪಡೆದರು. ಈ.ಎಸ್ ಗುಡಗೇರಿ, ಹೆಚ್.ಡಿ. ನಿಂಗರೆಡ್ಡಿ, ರೇಖಾ ಘೋರ್ಪಡೆ ನಿರ್ವಹಿಸಿದರು.