
ಲಕ್ಷ್ಮೇಶ್ವರ,ಮಾ26 : ಧರ್ಮ ಸಂಸ್ಥಾಪನೆ ಮತ್ತು ಧರ್ಮದ ಹಾದಿಯಲ್ಲಿ ಅಡ್ಡಿ ಆತಂಕ ಸೃಷ್ಟಿಸುವವರನ್ನು ಹತ್ತಿಕ್ಕಿ ಧರ್ಮರಕ್ಷಕನಾಗಿ ಅವತಾರವೆತ್ತಿದ ಶ್ರೀ ರಾಮ ಸಾಕ್ಷಾತ್ ಪರಶಿವನೇ ಆಗಿದ್ದಾನೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದಲ್ಲಿ ಪಟ್ಟಣದ ಪೇಟೆ ಹಾವಳಿ ಆಂಜನೇಯ ಕಮೀಟಿ ಮತ್ತು ಹಿಂದೂ ಮಹಾಸಭಾ ಗಣಪತಿ ವೇದಿಕೆಯಿಂದ ಶ್ರೀರಾಮ ನವಮಿ ಮತ್ತು ಹನುಮ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಶ್ರೀ ರಾಮನ ಹೆಸರೇ ರೋಮಾಂಚನ ಮತ್ತು ಅಧಮ್ಯ ಚೈತನ್ಯಶಕ್ತಿಯಾಗಿದೆ.
ರಾಮನ ಭಕ್ತರೆನಿಸಿಕೊಂಡ ನಾವೆಲ್ಲರೂ ದೇಶಭಕ್ತರು ಎನಿಸಿಕೊಳ್ಳಬೇಕು. ರಾಮಸೇವೆ ಮಾಡಬೇಕೆನ್ನುವವರು ಸಮಾಜ ಮತ್ತು ದೇಶಸೇವೆ ಮಾಡಿದರೆ ಅದುವೇ ಶ್ರೀ ರಾಮನ ಸ್ಮರಣೆ ಮತ್ತು ಸೇವೆಯಾಗಿದೆ. ಆ ನಿಟ್ಟಿನಲ್ಲಿ ಸುತ್ತಮುತ್ತ ಯಾರು ಕಷ್ಟ, ದುಃಖದಲ್ಲಿದ್ದಾರೆಯೋ, ದೀನ, ದುರ್ಬಲರಿದ್ದಾರೆ ಅವರಿಗೆ ಸಾಧ್ಯವಾದಷ್ಟು ಸೇವೆ ಮಾಡೋಣ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ ಯುವಕರು ಧರ್ಮ ರಕ್ಷಣೆಗಾಗಿ ಮುಂದಾಗಬೇಕು. ಅದಕ್ಕಾಗಿ ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆಯ ಗುಣವೂ ಬೇಕು. ನಮ್ಮ ಸಮಾಜ, ಧರ್ಮ, ಸಂಸ್ಕøತಿ, ದೇಶದ ಪ್ರಗತಿಗೆ ಪೂರಕವಾಗಿ ನಡೆದುಕೊಳ್ಳಬೇಕು ಇದಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಅಭಿಮಾನ, ಸ್ವಾಭಿಮಾನ ಮೆರೆಯಬೇಕು ಎಂದ ಅವರು ರಾಮಭಕ್ತರೆನಿಸಿಕೊಂಡವರಿಗೆಲ್ಲ ಶ್ರೀರಾಮನ ಶ್ರೀರಕ್ಷೆ ಇರಲಿ ಎಂದು ಹೇಳಿದರು.
ಸುನೀಲ ಮಹಾಂತಶೆಟ್ಟರ, ವಿಜಯಕುಮಾರ ಹತ್ತಿಕಾಳ, ಮಂಜುನಾಥ ಮಾಗಡಿ, ಮಾಂತೇಶ ಗೋಡಿ, ಫಕ್ಕೀರೇಶ ಅಣ್ಣಿಗೇರಿ, ಗಂಗಾಧರ ಕರ್ಜೆಕಣ್ಣವರ, ಬಸವರಾಜ ಚರ್ಕಸಾಲಿ,ಈಶ್ವರಪ್ಪ ಕುಂಬಾರ, ಶಂಕರ ಗೋಡಿ, ನಿಂಗಪ್ಪ ಬನ್ನಿ, ಮುರಘೇಂದ್ರಸ್ವಾಮಿ ಹಿರೇಮಠ, ಈರಣ್ಣ ಕಟಗಿ, ಈರಣ್ಣ ಪೂಜಾರ, ಮೌನೇಶ ಬಡಿಗೇರ, ಚಂದ್ರು ಹಂಪಣ್ಣವರ, ದೇವಪ್ಪ ಗಡೇದ, ಪ್ರಕಾಶ ಕುಂಬಾರ, ಜಗದೀಶ ಕುಂಬಾರ ಸೇರಿ ಪೇಟೆ ಹಾವಳಿ ಆಂಜನೇಯ ಕಮೀಟಿ ಮತ್ತು ಹಿಂದೂ ಮಹಾಸಭಾ ಗಣಪತಿ ವೇದಿಕೆ ಸದಸ್ಯರು, ಯುವಕರು ಪಾಲ್ಗೊಂಡಿದ್ದರು.
ಹಾವಳಿ ಆಂಜನೇಯ ದೇವಸ್ಥಾನದಿಂದ ಅಬ್ಬರದ ಡಿಜೆ, ಪಟಾಕಿ ಸದ್ದಿನೊಂದಿಗೆ ಆರಂಭವಾದ ಶ್ರೀರಾಮ ಮತ್ತು ಹನುಮಂತನ ಮೂರ್ತಿ ಮೆರವಣಿಗೆ ಭರಮದೇವರ ಸರ್ಕಲ್,ಆಸಾರ್ ಓಣಿ, ಹಳ್ಳದಕೇರಿ, ಪಂಪಸರ್ಕಲ್, ವಿದ್ಯಾರಣ್ಯ ವೃತ್ತ, ಪರ್ವತ ಮಲ್ಲಯ್ಯ ದೇವಸ್ಥಾನ, ಸೋಮೇಶ್ವರ ಪಾದಗಟ್ಟಿ, ಮುಖ್ಯ ಬಜಾರ್ ರಸ್ತೆಯ ಮೂಲಕ ಸಾಗಿತು. ಮೆರವಣಿಗೆ ಸಾಗುವ ಮಾರ್ಗ ಕೇಸರಿಮಯವಾಗಿತ್ತು. ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೂಬಸ್ತ್ ಏರ್ಪಡಿಸಲಾಗಿತ್ತು.