ದೇಶದ ಪ್ರಗತಿ,ಏಳಿಗೆಗೆ ನಮ್ಮನ್ನು ನಾವು ಅರ್ಪಿಸಬೇಕು: ಡಾ. ಅವ್ವಾಜಿ

ಕಲಬುರಗಿ:ಆ.15: ದೇಶದ ಉನ್ನತಿಯ ಕಡೆ ನಮ್ಮ ನಡೆಯಿರಲಿ, ನಮ್ಮ ದೇಶದ ಉಜ್ವಲ ಭವಿಷ್ಯವನ್ನು ಸೃಷ್ಠಿಸೋಣ, ನಾವೆಲ್ಲರೂ ಭಾರತಿಯರು ಎಂಬ ಭಾವನೆ ನಮ್ಮದಾಗಲಿ ಹಾಗೂ ದೇಶದ ಪ್ರಗತಿಗೆ ಹಾಗೂ ಏಳಿಗೆಗೆ ನಮ್ಮನ್ನು ನಾವು ಅರ್ಪಿಸಬೇಕೆಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‍ರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಕರೆ ನೀಡಿದರು.

ಶರಣಬಸವೇಶ್ವರ ವಿಶ್ವವಿದ್ಯಾಲಯದ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು. ಮೊದಲಿಗೆ ಕಲ್ಯಾಣ ಕರ್ನಾಟದ ಆರಾಧ್ಯ ದೈವರಾದ ಶ್ರೀ ಶರಣಬಸವೇಶ್ವರರನ್ನು ಮನದಲ್ಲಿ ನಮಿಸಿ ಮಾತನಾಡುತ್ತಾ ಎಲ್ಲಾ ಗುರುವೃಂದಕ್ಕೆ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ವಾತಂತ್ರೊತ್ಸವದ ಶುಭಾಷಯಗಳನ್ನು ತಿಳಿಸಿ, ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು ಇಂದಿಗೆ 76 ವರ್ಷಗಳು ಮುಗಿದು 77ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಆಗಸ್ಟ್ 15 ಯೋಧರ ಬಲಿದಾನ ತ್ಯಾಗದ ಪ್ರತಿಫಲದ ನೆನಪಿಗಾಗಿ ಹಾಗೂ ಸ್ವಾತಂತ್ರ ಪಡೆದ ದಿನವಾಗಿ ಗೌರವದಿಂದ ಭಾರತದ ಧ್ವಜವನ್ನು ಹಾರಿಸಿ, ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿರುವುದು ಅತಿ ಸಂತೋಷ ತಂದಿದೆ.

ಈ ವರ್ಷದ ಘೋಷವಾಕ್ಯ “ರಾಷ್ಟ್ರ ಮೊದಲು, ಯಾವಾಗಲೂ ಮೊದಲು” ಎಂದು ಆಚರಿಸುತ್ತಿದ್ದು ದೇಶದ ಪ್ರತಿವ್ಯಕ್ತಿಯಲ್ಲಿ ಏಕತೆಯ ಜಾಗೃತಿ, ವಿವಿಧತೆಯಲ್ಲಿ ಏಕತೆ ಕಾಣಸಿಗಬೇಕೆಂದರು. ಇದರಿಂದ ಪ್ರತಿ ಮನ-ಮನೆಯಲ್ಲಿ ರಾಷ್ಟ್ರ ಭಕ್ತಿಯ ಜ್ಯೋತಿ ಬೆಳಗಲಿ. ಎಲ್ಲರೂ ಸ್ವಾತಂತ್ರ ಹೋರಾಟಗಾರರ ಜೀವನ ಚರಿತ್ರೆಯನ್ನು ಓದಿ ತಿಳಿದುಕೊಳ್ಳಬೇಕು. ಜೀವನದುದ್ದಕ್ಕೂ ಯಾವುದೇ ಕಷ್ಟ-ಸಂಘರ್ಷಗಳು ಎದುರಾದರೂ ಅಂಜದೆ ಎದೆಗುಂದದೆ ಎಲ್ಲವನ್ನು ಮೆಟ್ಟಿ ನಿಲ್ಲಬೇಕೆಂದು ಡಾ. ಅವ್ವಾಜಿ ತಿಳಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವೇಶ್ವರ ಸಂಸ್ಥಾನ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದೇಶದ ಅಭಿವೃದ್ಧಿಗೆ ಹಾಗೂ ಉನ್ನತಿಗೆ ಕಾರಣವಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರಿಗೆ ಭೇಟಿ ಮಾಡಿ ಚರ್ಚಿಸಿದ್ದು ಒಂದು ಇತಿಹಾಸ. ಲಿಂ. ಪೂಜ್ಯ ಅಪ್ಪಾಜಿಯವರು 1917ರಲ್ಲಿ ಸಾರ್ವಜನಿಕರಿಗೆ ಓದಲು ಗ್ರಂಥಾಲಯ ತೆರೆದರು. ಅಲ್ಲಿ ದಿನಾಲೂ ದಿನಪತ್ರಿಕೆಗಳನ್ನು ತರಿಸಿ ಅದರ ಮುಖಾಂತರ ದೇಶ ಭಕ್ತಿಯ ಜಾಗೃತಿ ಮೂಡಿಸಲಾಗುತ್ತಿತ್ತು. ಇದನ್ನೆಲ್ಲಾ ನೋಡಿದ ಬಾಪೂಜಿಯವರು ಸಂಘ ಮತ್ತು ಸಂಸ್ಥೆ ಬಹಷ ಒಳ್ಳೆಯ ಕೆಲಸ ಮಾಡುತ್ತಿದೆ. ಹೀಗೆ ಮಾಡಿದರೆ ಬಹಳ ಎತ್ತರಕ್ಕೆ ಹೋಗುತ್ತೀರಿ ಎಂದರಂತೆ, ಹಾಗೆಯೇ ಇಂದು ಸಂಸ್ಥೆ ಮತ್ತು ಸಂಘ ಬಹಳ ಎತ್ತರಕ್ಕೆ ಬೆಳೆದಿದ್ದು ಬಹಳ ಸಂತೋಷ ತಂದಿದೆ ಎಂದರು.

ಮಾತೋಶ್ರೀ ಅವ್ವಾಜಿಯವರು ಮಾತನಾಡಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ವಿದ್ಯಾಭ್ಯಾಸದ ಜೊತೆಗೆ ದೇಶಭಕ್ತಿಯ ಸಂಸ್ಕøತಿ ಹಾಗೂ ಶರಣ ತತ್ವ ಕಲಿಸಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡಲಾಗುತ್ತಿದೆ.

ಈ ವರ್ಷ ನಾವು ವೈದ್ಯಕೀಯ ಲೋಕದಲ್ಲಿ ಪಾದಾರ್ಪಣೆ ಮಾಡಿ ಡಿ. ಫಾರ್ಮ್ ಮತ್ತು ಬಿ. ಫಾರ್ಮ್ ಹೊಸ ಕೋರ್ಸಗಳನ್ನು ಪರಿಚಯಿಸಿದ್ದೇವೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡು ದೇಶದ ಒಳ್ಳೆಯ ಪ್ರಜೆಯಾಗಿ ಹೊರಹೊಮ್ಮಬೇಕು ಎಂದು ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ತಿಳಿಸಿದರು.

ಈ ಸಂಭ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅಧ್ಯಕ್ಷತೆ ವಹಿಸಿದ್ದು ಹಾಗೂ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಮಕ್ಕಳಾದ ಕುಮಾರಿ ಶಿವಾನಿ ಎಸ್. ಅಪ್ಪ, ಕುಮಾರಿ ಭವಾನಿ ಎಸ್. ಅಪ್ಪ ಹಾಗೂ ಕುಮಾರಿ ಮಹೇಶ್ವರಿ ಎಸ್. ಅಪ್ಪ ದೇಶಭಕ್ತಿ ಗೀತೆ ಹಾಡಿದ್ದು ವಿಶೇಷವಾಗಿತ್ತು.

ನಂತರ ಎನ್‍ಸಿಸಿ, ಎನ್‍ಎಸ್‍ಎಸ್, ಶರಣಬಸವ ವಿಶ್ವವಿದ್ಯಾಲಯ, ಶರಣಬಸವೇಶ್ವರ ರೆಸಿಡೆನ್ಸಿಯಲ್ ಶಾಲೆ ಹಾಗೂ ಇತರ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಂದ ಮಾತೋಶ್ರೀ ಡಾ. ಅವ್ವಾಜಿಯವರು ಗೌರವ ವಂದನೆ ಸ್ವೀಕರಿಸಿದರು. ತದನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ಈ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ವಿ ನಿಷ್ಠಿ, ಸಮಕುಲಪತಿ ಪ್ರೊ. ವಿ. ಡಿ. ಮೈತ್ರಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಪ್ರೊ. ಕಿರಣ ಮಾಕಾ ಸೇರಿಂದತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ವಿ ನಿಷ್ಠಿ ವಿವಿಯ ಧ್ವಜಸ್ಥಂಭದಲ್ಲಿ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿಸಮಕುಲಪತಿ ಪ್ರೊ. ವಿ. ಡಿ. ಮೈತ್ರಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಪ್ರೊ. ಕಿರಣ ಮಾಕಾ ಸೇರಿಂದತೆ ಇತರ ಪ್ರಮುಖರು ಉಪಸ್ಥಿತರಿದ್ದರು.