ದೇಶದ ನೈಜ ಇತಿಹಾಸ ಅರಿಯುವದು ಅಗತ್ಯ


ಧಾರವಾಡ ಜ.5-: ಇಂದಿನ ತಲೆಮಾರಿನವರು ದೇಶದ ನೈಜ ಇತಿಹಾಸವನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ. ಅದಕ್ಕಾಗಿ ನಿರಂತರ ಓದು, ಚರ್ಚೆ ಅವಶ್ಯಕವಾಗಿದೆ. ಇತಿಹಾಸದಲ್ಲಿನ ಎಷ್ಟೋ ಸತ್ಯ ಸಂಗತಿಗಳು ಇಂದಿನ ತಲೆಮಾರಿಗೆ ಗೊತ್ತೇ ಇಲ್ಲ ಎಂದು ಹಿರಿಯ ಪತ್ರಕರ್ತರು ಮತ್ತು ಚಿಂತಕರಾದ ರಂಜಾನ್ ದರ್ಗಾ ಖೇಧ ವ್ಯಕ್ತಪಡಿಸಿದರು.
ಅವರು ಇತ್ತೀಚೆಗೆ ಧಾರವಾಡದ ಗಣಕರಂಗ ಸಂಸ್ಥೆಯು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ 203ನೇ ಭೀಮಾ ಕೋರೆಗಾಂವ ವಿಜಯೋತ್ಸವ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ 190ನೇಯ ಜಯಂತಿ ಹಾಗೂ ಗಣಕರಂಗ ಪ್ರಕಾಶನದ ಎರಡು ಹೊಸ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭೀಮಾ ಕೋರೆಗಾಂವ ಕದನದಲ್ಲಿ ಒಗ್ಗಟ್ಟಿನಿಂದ ಹೋರಾಡಿದ ಸರ್ವ ಶೋಷಿತರ ಕುರಿತು ತಿಳಿದುಕೊಳ್ಳುವುದು ಇನ್ನೂ ಬಹಳ ಇದೆ. ಅದರಂತೆ, ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಅಕ್ಷರ ಚಳುವಳಿಗೆ ಕೈಜೋಡಿಸಿದ ಫಾತೀಮಾ ಶೇಖ, ಉಸ್ಮಾನಶೇಖರಂಥಹ ವ್ಯಕ್ತಿತ್ವಗಳ ಕುರಿತು ಸಹ ತಿಳಿದುಕೊಳ್ಳುವುದು ಅವಶ್ಯಕವಿದೆ. ಅದರಂತೆ, ಸಾಹಿತ್ಯದಲ್ಲಿ ವಿಷಯವನ್ನು ಸಂಪೂರ್ಣ ಅರಿತುಕೊಂಡ ಮೇಲೆ ಸತ್ಯದ ಮೂಲಕ ಹೊಸದನ್ನು ಸೃಷ್ಟಿಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗಣಕರಂಗ ಪ್ರಕಾಶನದ ಹಿಪ್ಪರಗಿ ಸಿದ್ಧರಾಮ ಸಂಪಾದನೆಯ ‘ನೆನಪುಗಳು’ ಕಥಾಸಂಕಲನ ಮತ್ತು ಗಣಪತಿ ಚಲವಾದಿ ಸಂಪಾದನೆಯ ‘ಕರುನಾಡ ಹಿರಿಮೆ ಹಾಗೂ ಪರಂಪರೆ’ ಲೇಖನಗಳ ಸಂಕಲನ ಎಂಬ ಎರಡು ಗ್ರಂಥಗಳನ್ನು ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ ಲೋಕಾರ್ಪಣೆ ಮಾಡಿದರು. ಲೋಕಾರ್ಪಣೆ ಮಾಡಿ ಮಾತನಾಡಿದ ವಾಡಪ್ಪಿಯವರು, ಗಣಕರಂಗ ಪ್ರಕಾಶನದಿಂದ ಹೊಸ ಪ್ರತಿಭೆಗಳ ಬರಹಗಳ ಸಂಕಲನಗಳನ್ನ ಪ್ರಕಟಿಸುತ್ತಿರುವುದು ಅಭಿನಂಧನೀಯ ಕೆಲಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬೆಳಗಾವಿಯ ಸಾಹಿತಿ ಡಾ.ಎಚ್.ಬಿ.ಕೋಲಕಾರ ಕೃತಿಗಳ ಪರಿಚಯ ಮಾಡಿಕೊಡುತ್ತಾ, ಓದಿನ ಹರವು, ವಿಷಯದ ಆಳ ಅರಿತುಕೊಂಡು ಕೃತಿಗಳು ರಚನೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯ ಕಲಾವಿದ ಬಿ.ಮಾರುತಿ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ, ಸಂಶೋಧಕ ಡಾ.ಎಸ್.ಎಸ್.ದೊಡಮನಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಲೋಕಾರ್ಪಣೆಯಾದ ಪುಸ್ತಕಗಳಿಗೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ ಗಣಪತಿ ಗೋ. ಚಲವಾದಿ, ಮೈಲಾರಣ್ಣ ಬೂದಿಹಾಳ, ಸರಸ್ವತಿ ಭೋಸಲೆ ಅವರನ್ನು ಸಹ ಶಾಲು ಹೊದಿಸಿ ಗೌರವಿಸಲಾಯಿತು. ಹಾಗೆಯೇ ಎರಡೂ ಪುಸ್ತಕಗಳಿಗೆ ಕಥೆ-ಲೇಖನ ಬರೆದ ಕಥೆಗಾರರು ಮತ್ತು ಲೇಖಕರಿಗೆ ಪುಸ್ತಕಗೌರವ, ಶಾಲು, ಮುತ್ತಿನ ಹಾರವನ್ನು ಹೊದಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ ಉಪಸ್ಥಿತರಿದ್ದರು. ಲಕ್ಷ್ಮಣ ಬಕ್ಕಾಯಿ ಪ್ರಾರ್ಥಿಸಿ, ಸ್ವಾಗತಿಸಿದರು. ಯೋಗೇಶ ಪಾಟೀಲ ನಿರೂಪಿಸಿ, ವಂದಿಸಿದರು. ಸಂತೋಷ ಕುರುಬರ, ಭೀಮನಗೌಡ ಕಠಾವಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಬಸವರಾಜ್ ಭೂತಾಳಿ ನಿರ್ಮಾಣದ, ವಿಶಾಲರಾಜ್ ನಿರ್ದೇಶನದ ‘ಸಾವಿತ್ರಿಬಾಯಿ ಫುಲೆ’ ಕನ್ನಡ ಚಲನಚಿತ್ರ ಪ್ರದರ್ಶನಗೊಂಡಿತು.