ದೇಶದ ನೆಮ್ಮದಿಗೆ ಯೋಧರು ಕಾರಣ: ಮೋದಿ ಪ್ರಶಂಸೆ

ಶ್ರೀನಗರ,ನ.೪- ದೇಶದ ಜನತೆ ನೆಮ್ಮದಿಯಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿರುವುದಕ್ಕೆ ನೀವೇ ಕಾರಣ ಎಂದು ಯೋಧರ ಕಾರ್ಯವೈಖರಿಯನ್ನು ಪ್ರಧಾನಿ ನರೇಂದ್ರಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ನರೇಂದ್ರಮೋದಿ ಅವರು ಇಂದು ಜಮ್ಮು-ಕಾಶ್ಮೀರದ ನೌಶೇರಾದಲ್ಲಿ ಯೋಧರೊಂದಿಗೆ ಬೆಳಕಿನ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡರು.
ಈ ವೇಳೆ ಯೋಧರನ್ನುದ್ದೇಶಿಸಿ ಮಾತನಾಡಿದ ಅವರು, ಸಂಕಷ್ಟ ಸ್ಥಿತಿಯಲ್ಲೂ ಯೋಧರು ದೇಶ ಸೇವೆ ಮಾಡುತ್ತಿದ್ದಾರೆ ಎಂದು ಸೇನೆಯ ಕಾರ್ಯವನ್ನು ಕೊಂಡಾಡಿದರು.
ಪಾಕಿಸ್ತಾನ ಬಾಲಾಕೋಟ್‌ನಲ್ಲಿ ಭಾರತೀಯ ಸೇನಾಪಡೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ನೌಶೇರಾದ ಬ್ರಿಗೇಡಿಯರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.
ನಮ್ಮ ದೇಶದ ಯೋಧರ ಬಗ್ಗೆ ಇಡೀ ಜಗತ್ತಿಗೆ ಹೆಮ್ಮೆ ಇದೆ. ದೇಶ ಸೇವೆ ಮಾಡುವುದು ಅತ್ಯಂತ ಗೌರವದ ವಿಷಯ. ದೇಶದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಇದ್ದೇವೆ ಎಂದರೆ ಅದಕ್ಕೆ ನೀವೇ ಕಾರಣ ಎಂದು ಹೇಳಿದರು.
ತಾವು ಪ್ರತಿ ದೀಪಾವಳಿಯನ್ನು ಗಡಿ ಕಾಯುವ ಸೈನಿಕರೊಂದಿಗೆ ಕಳೆದಿದ್ದೇನೆ. ನಮ್ಮ ಸೈನಿಕರಿಗಾಗಿ ಕೊಟ್ಯಂತರ ಭಾರತಿಯರ ಆರ್ಶೀವಾದವನ್ನು ನನ್ನೊಂದಿಗೆ ತಂದಿದ್ದೇನೆ ಎಂದು ಹೇಳಿದರು.
ನಮ್ಮ ಯೋಧರು ಭಾರತ ಸುರಕ್ಷಾ ಕವಚ, ನಿಮ್ಮೆಲ್ಲರಿಂದಾಗಿ ದೇಶದ ಜನರು ಶಾಂತಿಯುತವಾಗಿ ನಿದ್ದೆ ಮಾಡಲು ಮತ್ತು ಹಬ್ಬಗಳ ಸಮಯದಲ್ಲಿ ಸಂತೋಷವಾಗಿರಲು ಸಾಧ್ಯವಾಗಿದೆ ಎಂದು ಯೋಧರ ಸೇವೆಯನ್ನು ಪ್ರಧಾನಿ ಸ್ಮರಿಸಿದ್ದಾರೆ.
೨೦೧೪ ರಿಂದಲೂ ಸೈನಿಕರೊಂದಿಗೆ ದೀಪಾವಳಿ ಆಚರಿಸಿಕೊಳ್ಳುತ್ತಿರುವ ಸಂಪ್ರದಾಯವನ್ನು ಪ್ರಧಾನಿ ಮುಂದುವರೆಸಿಕೊಂಡು ಬಂದಿದ್ದಾರೆ. ಕಳೆದ ವರ್ಷ ರಾಜಸ್ತಾನದ ಜೈಸ್ಮಲೇರ್‌ನ ಲೋಂಗೆವಾಲಾ ಗಡಿಯಲ್ಲಿ ಯೋಧರೊಂದಿಗೆ ಪ್ರಧಾನಿ ದೀಪಾವಳಿ ಆಚರಿಸಿದ್ದರು.
ನೌಶೇರಾಗೆ ಪ್ರಧಾನಿ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಣೆ ಈ ಭಾಗದಲ್ಲಿ ವೈಮಾನಿಕ ಪರಿಶೀಲನೆ ನಡೆಸಿದರು. ಜಮ್ಮು ಪ್ರದೇಶದಲ್ಲಿನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.