ದೇಶದ ನಿಜವಾದ ಶ್ರೀಮಂತ ಸಂಪನ್ಮೂಲ ಯುವಶಕ್ತಿ

ತುಮಕೂರು, ಆ. ೧- ದೇಶದ ನಿಜವಾದ ಶ್ರೀಮಂತ ಸಂಪನ್ಮೂಲವೆಂದರೆ ಅದು ಯುವಶಕ್ತಿ. ಯುವ ಮನಸ್ಸುಗಳ ಇಚ್ಛಾಶಕ್ತಿ ಸಮಾಜದ ಪ್ರಗತಿಗೆ ಸೇವೆಯಾಗಿ ಬಳಕೆಯಾಗಬೇಕು. ಆಗ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಕೊರಟಗೆರೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ಮಲ್ಲೇಕಾವು ಗ್ರಾಮದಲ್ಲಿ ೭೫ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಯುವಜನತೆಯ ನಡೆ ಆರೋಗಕ್ಯಕರ ಸಮಾಜ ನಿರ್ಮಾಣದ ಕಡೆ ಎಂಬ ಘೋಷವಾಕ್ಯದೊಂದಿಗೆ ಏಳು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಆರ್ಥಿಕವಾಗಿ ಸಾಮಾಜಿಕವಾಗಿ ಮುನ್ನಡೆಯಬೇಕಾದರೆ ಯುವಜನತೆಯ ಪಾತ್ರ ಬಹಳ ಮುಖ್ಯವಾಗಿದೆ. ಯುವಜನರು ತಮ್ಮ ಅಭ್ಯಾಸಗಳ ಜೊತೆ ಈ ರೀತಿಯಾದ ಶಿಬಿರಗಳಲ್ಲಿ ತೊಡಗಿಸಿಕೊಳ್ಲೂವ ಮೂಲಕ ಆರೋಗ್ಯಪೂರ್ಣವಾದ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ರಾಷ್ಟ್ರೀಯ ಸೇವಾ ಯೋಜನೆ ಮಹಾತ್ಮಗಾಂಧೀಜಿಯವರ ಕನಸಿನ ಕೂಸು. ಅದನ್ನು ಅವರ ಸ್ಮರಣಾರ್ಥ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ. ಸರ್ವೇಪಲ್ಲಿ ರಾಧಕೃಷ್ಣನ್ ಅವರ ಒತ್ತಾಸೆಯಂತೆ ಪ್ರಧಾನಿ ಜವಹಾರ್‌ಲಾಲ್ ನೆಹರುರವರು ಯುವಕರು ಶಿಕ್ಷಣದ ಜೊತೆಗೆ ಸೇವಾ ಮನೋಭಾವ ರೂಢಿಸಿಕೊಳ್ಳಲೆಂದು ಅನುಷ್ಠಾನಕ್ಕೆ ತಂದರು ಹಾಗಾಗಿ ಯುವಜನತೆ ತಮ್ಮ ಶಿಕ್ಷಣದ ಜೊತೆಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಯುವಜನ ಇಂದು ದುಶ್ಚಟಗಳ ದಾಸರಾಗಿ ಅಕಾಲ ಮರಣಕ್ಕೆ ತುತ್ತಾಗುತ್ತಿರುವುದು ಆತಂಕ ತಂದಿದೆ. ತಂದೆ ತಾಯಿಗೆ ಆಸರೆಯಾಗಿ ನಿಲ್ಲಬೇಕಾದ, ತಂದೆ ತಾಯಿ ತಿರಿಕೊಂಡರೆ ಮಕ್ಕಳು ಸಂಸ್ಕಾರ ಮಾಡುವುದಕ್ಕೆ ಬದಲಾಗಿ ಹೆತ್ತವರೇ ಮಕ್ಕಳ ಶವಸಂಸ್ಕಾರ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ ಅದಕ್ಕಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಪ್ರಸನ್ನ ಮಾತನಾಡಿ ಕಾಲೇಜಿನ ವತಿಯಿಂದ ನಡೆಯುತ್ತಿರುವ ಎನ್.ಎಸ್.ಎಸ್. ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು, ಗ್ರಾಮದ ಜನರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು ಎಂದರು ಸಾಹಿತಿ ಹಾಗೂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಓ. ನಾಗರಾಜು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿ ವಿದ್ಯಾರ್ಥಿಗಳಿ ಇಲ್ಲಿನ ಪರಿಸದ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು,
ಕಾರ್ಯಕ್ರಮದಲ್ಲಿ ಶಿಬಿರಾಧಿಖಾರಿಗಳಾದ ಡಾ. ತಿಪ್ಪೇಸ್ವಾಮಿ, ವಿನುತ, ಸಿದ್ದರಾಜು, ಬೂದಗವಿ ಗ್ರಾಮಪಂಚಾಯ್ತಿಯ ಅಧ್ಯಕ್ಷರಾದ ವಿನೋದ, ಸದಸ್ಯರಾದ ಬಸವರಾಜಪ್ಪ, ಆಟೋಗೋವಿಂದರಾಜು ಮತ್ತು ಕವಿತ, ಸಹಪ್ರಾಧ್ಯಾಪಕರಾದ ರಂಜಿತಾ, ಶಾಂತಕುಮಾರಿ, ಡಾ. ದೀಪ, ಲಾವಣ್ಯ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಧ್ಯಾಪಕ ಡಾ. ಡಿ. ಶಿವನಂಜಯ್ಯ ಕಾರ್ಯಕ್ರಮ ನಿರೂಪಿಸಿದರು. ಡಾ. ಶಿವಪ್ಪ ವಂದಿಸಿದರು.