ದೇಶದ ದಿಕ್ಕು-ದಿಸೆ ಬದಲಿಸುವ ಗತಿಶಕ್ತಿ

ನವದೆಹಲಿ, ಅ.೧೩- ದೇಶದ ಆರ್ಥಿಕ ವಲಯಗಳಿಗೆ ಬಹು ಮಾದರಿ ಸಂಪರ್ಕ ಕಲ್ಪಿಸುವ “ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಕ್ರಿಯಾಯೋಜನೆ” ಭಾರತೀಯ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.

ರಸ್ತೆ ,ರೈಲು, ವಿಮಾನಯಾನ ಮತ್ತು ಕೃಷಿ ಅಭಿವೃದ್ಧಿ ಯೋಜನೆಗಳು ಸೇರಿ ವಿವಿಧ ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಲು ಗತಿ ಶಕ್ತಿ ಸಹಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

೧೦೦ ಲಕ್ಷ ಕೋಟಿ ಮೊತ್ತದ “ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ “ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇದಾಗಿದೆ . ಜೊತೆಗೆ ಮೂಲಸೌಕರ್ಯ ಕಲ್ಪಿಸುವುದರಿಂದ ಹೂಡಿಕೆದಾರರಿಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಪಿಎಂ ಗತಿ ಶಕ್ತಿ ಯೋಜನೆ ಭಾರತ್ ಮಾಲಾ ಸಾಗರಮಾಲಾ, ಒಳನಾಡು ಜಲಸಾರಿಗೆ, ಬಂದರು,ಉಡಾನ್, ಆರ್ಥಿಕ ವಲಯಗಳಾದ ಜವಳಿ ಕ್ಲಸ್ಟರ್ ಔಷಧ ಪ್ಲಾಸ್ಟರ್ ರಕ್ಷಣಾ ಕಾರಿಡಾರ್, ಎಲೆಕ್ಟ್ರಾನಿಕ್ ಪಾರ್ಕ್, , ಕೈಗಾರಿಕಾ ಕಾರಿಡಾರ್, ಗಾರಿಕೆ ಕ್ಲಸ್ಟರ್, ಕೃಷಿ ಕಾರಿಡಾರ್ ಗಳ ನಡುವೆ ಸುಲಭ ಉದ್ಯಮ ವ್ಯವಹಾರಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ

ಮುಂದಿನ ಪೀಳಿಗೆಯ ಮೂಲಸೌಕರ್ಯ ಯೋಜನೆಗೆ ಹಾಗೂ ಬಹು ಮಾದರಿಯ ಸಂಪರ್ಕ ಕಲ್ಪಿಸುವ ಜೊತೆಗೆ ೨೧ನೇ ಶತಮಾನದ ಚೇತರಿಕೆಗೆ ಇದು ಸಹಕಾರಿಯಾಗಲಿದೆ . ಸುಲಭ ಉದ್ಯಮಕ್ಕೆ ಮೂಲಸೌಕರ್ಯ ಪೂರಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ರಸ್ತೆ ರೈಲು ವಿಮಾನ ಯಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ಹಿನ್ನೆಲೆಯಲ್ಲಿ ಜನರ ಪ್ರಯಾಣದ ಅವಧಿ ಕಡಿಮೆಯಾಗಲಿದೆ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ದೇಶದ ಆರ್ಥಿಕತೆಯನ್ನು ೫ ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಹೆಚ್ಚಿಸುವ ಗುರಿ ಸಾಧನೆಗೆ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ೨೫ ವರ್ಷಗಳ ಕಾಲ ದೇಶಾದ್ಯಂತ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮತ್ತು ೨೧ನೇ ಶತಮಾನದ ಅಭಿವೃದ್ಧಿ ಯೋಜನೆಗಳಿಗೆ ಪೂರ್ವಕವಾಗಿ ಯೋಜನೆ ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ..

ದೇಶದಲ್ಲಿ ಹಿಂದಿನ ಸರ್ಕಾರಗಳು ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದವು ಆದರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಕೈಗೆತ್ತಿಕೊಂಡಿರುವ ಯೋಜನೆಗಳಿಂದಾಗಿ ದೇಶದ ಮೂಲಸೌಕರ್ಯ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಮೂಲ ಸೌಕರ್ಯ ಕಲ್ಪಿಸುವುದು ದೇಶದ ಪ್ರಮುಖ ಆದ್ಯತೆ ಎಂದು ಬಹುತೇಕ ಪಕ್ಷಗಳು ನಂಬುವುದಾದರೆ ಅದನ್ನು ಕಾರ್ಯಗತಕ್ಕೆ ತರಲು ಕೆಲವೇ ಕೆಲವು ಪಕ್ಷಗಳಿಂದ ಮಾತ್ರ ಸಾಧ್ಯ ಎಂದು ಹೇಳಿದವರು ದೇಶದಲ್ಲಿ ಇದೀಗ ಮೂಲಸೌಕರ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಮುಂದಾಗಿರುವುದು ತಿಳಿಸಿದ್ದಾರೆ.

  • ೧೦೦ ಲಕ್ಷ ಕೋಟಿ ಮೊತ್ತದ ಪಿಎಂ ಗತಿ ಶಕ್ತಿ ಯೋಜನೆಗೆ ಚಾಲನೆ
  • ರಸ್ತೆ ರೈಲು ವಿಮಾನ ಯಾನ ಕ್ಷೇತ್ರಗಳಲ್ಲಿ ಸಂಪರ್ಕಕಲ್ಪಿಸಲು ಸಹಕಾರಿ
  • ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಪ್ರಧಾನಿ ಬಣ್ಣನೆ
  • ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಲು ಸಹಕಾರಿ
  • ಮುಂದಿನ ಪೀಳಿಗೆಗೆ ಮೂಲಸೌಕರ್ಯ ಕಲ್ಪಿಸಲು ಹಲವು ಕ್ರಮ
  • ಬಹು ಮಾದರಿಯ ಸಂಪರ್ಕ ಕಲ್ಪಿಸುವುದರಿಂದ ಉದ್ಯಮ ವ್ಯವಹಾರಕ್ಕೂ ಸುಲಭ