ದೇಶದ ಜನರಿಗೆ ಕೇಂದ್ರ ದೀಪಾವಳಿ ಗಿಫ್ಟ್

ನವದೆಹಲಿ, ನ. ೧೨- ಹಿಂದೆಂದೂ ಕಾಣದಂತಹ ತೀವ್ರ ಕುಸಿತ ಕಂಡಿರುವ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದು ಹೊಸಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ.
ಹೊಸಕಾರ್ಯಕ್ರಮಗಳಿಂದಾಗಿ ದೇಶದ ಆರ್ಥಿಕತೆಗೆ ಹೊಸಚೈತನ್ಯ ತುಂಬಲು ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ಪತ್ರಿಕಾಗೋಷ್ಠಿಯಲ್ಲಿಂದು ಪ್ರಕಟಿಸಿದರು.
ಕಳೆದ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ್ದ ೨೧ ಲಕ್ಷ ಕೋಟಿ ರೂ. ಆತ್ಮನಿರ್ಬರ ಭಾರತ ಪ್ಯಾಕೇಜ್ ನಿರೀಕ್ಷಿತ ಫಲ ನೀಡಿಲ್ಲ ಎಂಬ ಆರ್ಥಿಕ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಹೊಸ ಕಾರ್ಯಕ್ರಮUಳನ್ನು ಪ್ರಕಟಿಸುತ್ತಿರುವುದಾಗಿ ನಿರ್ಮಲಾ ಅವರು ಹೇಳಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ ೧.೦೫ ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದರೂ, ಆರ್ಥಿಕ ಬೆಳವಣಿಗೆ ನಿರೀಕ್ಷಿತ ರೀತಿಯಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಹೊಸಕಾರ್ಯಕ್ರಮಗಳು ಅನಿವಾರ್ಯ ಎಂಬ ಮಾತನ್ನು ಅವರು ಪುನರುಚ್ಚರಿಸಿದರು.
ಈಗಾಗಲೇ ಒಂದು ರಾಷ್ಟ್ರ ಒಂದು ಪಡಿತರ ಯೋಜನೆಯನ್ನು ೨೮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರುವ ಮೂಲಕ ಬಡಕುಟುಂಬಗಳಿಗೆ ಪಡಿತರ ಪೂರೈಸಲು ಯೋಜನೆ ರೂಪಿಸಲಾಗಿದೆ. ೬೮ ಕೋಟಿಗೂ ಅಧಿಕ ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದರು.
ಬೀದಿಬದಿ ವ್ಯಾಪಾರಿಗಳಿಗಾಗಿ ಪ್ರಧಾನ ಮಂತ್ರಿಗಳು ೧೦ ಸಾವಿರ ರೂ. ಸಾಲ ಸೌಲಭ್ಯವನ್ನು ಪ್ರಕಟಿಸಿದ್ದು, ಇದೂ ಕೂಡ ಆರ್ಥಿಕ ಸುಧಾರಣಾ ಕ್ರಮಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದರು.
ಬ್ಯಾಂಕ್ ಗಳಿಂದ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ಅಧಿಕ ಪ್ರಮಾಣದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಕೊರೊನಾ ಸೋಂಕಿನಿಂದ ತತ್ತರಿಸಿದ್ದ ದೇಶದ ಆರ್ಥಿಕತೆಗೆ ಚೈತನ್ಯ ನೀಡಲು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಿರ್ಮಲಾ ಸೀತರಾಮನ್ ಪ್ರಕಟಿಸಿದ್ದಾರೆ.
ದೇಶದ ಅರ್ಥವ್ಯವಸ್ಥೆ ಸುಧಾರಣೆಯತ್ತ ಸಾಗಿದ್ದು ಜಿಡಿಪಿ ಕೂಡ ಏರಿಕೆಯಾಗಿದೆ. ಜಿಡಿಪಿ ಏರಿಕೆ ಅರ್ಥ ವ್ಯವಸ್ಥೆಯ ಸುಧಾರಣೆಯ ಸೂಚಕವಾಗಿದೆ ಎಂದವರು ಹೇಳಿದರು. ವಿದ್ಯುತ್ ಬಳಕೆ ಶೇ. ೧೨ ರಷ್ಟು ಹೆಚ್ಚಾಗಿದೆ. ಬ್ಯಾಂಕ್‌ಗಳ ಸಾಲ ನೀಡುವಿಕೆಯಲ್ಲಿ ಶೇ. ೫ ರಷ್ಟು ಸುಧಾರಣೆಯಾಗಿದೆ. ಸ್ವನಿಧಿ ಯೋಜನೆ ಅನ್ವಯ ೨೬.೨೬ ಕೋಟಿ ರೂ. ಸಾಲ ನೀಡಲಾಗಿದೆ ಎಂದವರು ತಿಳಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಒಟ್ಟು ೧೩೭೩ ಕೋಟಿ ರೂ. ಸಾಲ ನೀಡಲಾಗಿದೆ. ಸಾಲಕ್ಕೆ ೨೬.೬೨ ಲಕ್ಷ ಅರ್ಜಿಗಳು ಬಂದಿದ್ದವು ಎಂದವರು ಹೇಳಿದರು.
ರೈತರಿಗೆ ಸಾಲ ನೀಡಲು ನಬಾರ್ಡ್ ಮೂಲಕ ೨೫ ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ೨.೫ ಕೋಟಿ ರೈತರಿಗೆ ೧.೪ ಲಕ್ಷ ಕೋಟಿ ರೂ. ನೀಡಲಾಗಿದೆ ಎಂದು ಅವರು ಹೇಳಿದರು.
ಆತ್ಮ ನಿರ್ಭರ್ ಭಾರತ್ ರೋಜ್‌ಗಾರ್ ಯೋಜನೆಯಲ್ಲಿ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಕೆಲಸ ಕಳೆದುಕೊಂಡ ನೌಕರರಿಗೆ ಇಪಿಎಸ್ ಸೌಲಭ್ಯ ದೊರೆಯಲಿದೆ. ಮುಂದಿನ ಎರಡು ವರ್ಷ ಪಿ.ಎಫ್. ಸಬ್ಸಿಡಿ ನೀಡಲಾಗುವುದು ಎಂದವರು ಹೇಳಿದರು.

ಹಲವು ಯೋಜನೆಗಳನ್ನು ಸಚಿವೆ ನಿರ್ಮಲಾ ಪ್ರಕಟಿಸುವ ಮೂಲಕ ದೇಶದ ಜನರಿಗೆದೀಪಾವಳಿ ಕೊಡುಗೆ ನೀಡಿದ್ದಾರೆ.