
ದಾವಣಗೆರೆ.ಏ.೨೫; ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ಕಳೆದ 9 ವರ್ಷಗಳಲ್ಲಿ ಹಿಂದೆಂದೂ ಕಂಡರಿಯದ ಅಭಿವೃದ್ಧಿಯನ್ನು ಸಾಧಿಸಿದ್ದು, ದೇಶದ ಜನತೆಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸಿದೆ ಎಂದು ಕೇಂದ್ರ ಬಂದರು ಮತ್ತು ಆಯುಷ್ ಸಚಿವಾಲಯದ ಸಚಿವರಾದ ಸರ್ಬಾನಂದ್ ಸೋನಾವಾಲಾ ಹೇಳಿದರು.ನಗರದ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಂದು ರಾಜ್ಯಗಳಿಗೂ ಮೂಲಭೂತ ಸೌಲಭ್ಯ ವಿವಿಧ ಸೌಕರ್ಯಗಳನ್ನು ಕಲ್ಪಿಸುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದ್ದು, ಈ ಹಿಂದೆ ವಿಶ್ವದಲ್ಲಿ 11ನೇ ಸ್ಥಾನದಲ್ಲಿದ್ದ ನಮ್ಮ ದೇಶವನ್ನು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕ ಸ್ವಾಬಲಂಬನೆ ದೇಶವನ್ನಾಗಿ ಮಾಡಿದೆ ಎಂದು ಹೇಳಿದರು.ಬಿಜೆಪಿಯ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಿದೆ. ಕಳೆದ 55 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಸಾಧಿಸದೆ ಕೇವಲ ಎಲ್ಲಾ ಹಂತಗಳಲ್ಲೂ ವಿಫಲವನ್ನು ಸಾಧಿಸಿದ ಕಾಂಗ್ರೆಸ್ ಸರ್ಕಾರ ನಮ್ಮ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಹೊಂದಿಲ್ಲ ಎಂದರು.ಸುಡಾನ್ ದೇಶದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಈಗಾಗಲೇ ಹಲವು ಹಂತದ ಮಾತುಕತೆಗಳನ್ನು ನಡೆಸಲಾಗಿದೆ. ಅಲ್ಲದೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಮಯದಲ್ಲಿ ಮಾಡಿದ ಸುರಕ್ಷತಾ ಕ್ರಮಗಳನ್ನು ಈಗಲೂ ಪಾಲಿಸಲಿ ಎಲ್ಲಾ ಜನರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ಕ್ರಮಗಳನ್ನು ಕೈ ಗೊಳ್ಳಲಾಗುತ್ತಿದೆ ಎಂದು ಹೇಳಿದರು.ಕರ್ನಾಟಕದ ಜನತೆ ಪ್ರಜ್ಞಾವಂತರು ಮತ್ತು ಬುದ್ಧಿವಂತರು ಹಾಗಾಗಿ ಅವರು ಎಲ್ಲವನ್ನು ಗಮನಿಸಿದ್ದಾರೆ. ಈ ನಿಟ್ಟಿನಲ್ಲಿ ಸದಾ ಅಭಿವೃದ್ಧಿ ಮತ್ತು ದೇಶದ ಪರವಾಗಿ ಇರುವ ಬಿಜೆಪಿಗೆ ಅವರು ಮತದಾನ ಮಾಡಲಿದ್ದಾರೆ. ಇಡೀ ಜಗತ್ತಿನಲ್ಲಿಯೇ ಭಾರತವನ್ನು ಮುಂಬರುವ ದಿನಗಳಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವ ಕನಸನ್ನು ಮೋದಿ ಹೊಂದಿದ್ದಾರೆ ಅದೇ ರೀತಿ ದೇಶದಲ್ಲಿಯೇ ಕರ್ನಾಟಕ ಬಲಿಷ್ಠ ರಾಜ್ಯ ಮಾಡಬೇಕಾಗಿದೆ. ಅದಕ್ಕಾಗಿ ರಾಜ್ಯದ ಜನತೆ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಆ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್, ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಜಿ.ಅಜಯ್ ಕುಮಾರ್, ಜಿಲ್ಲಾ ವಕ್ತಾರ ಡಿ.ಎಸ್. ಶಿವಶಂಕರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ, ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್, ಸೋಗಿ ಶಾಂತಕುಮಾರ್, ರಾಜನಹಳ್ಳಿ ಶಿವಕುಮಾರ್, ಜಿ.ಎಸ್.ಅನಿತ್ ಕುಮಾರ್, ಪ್ರಸನ್ನಕುಮಾರ್ ಸೇರಿದಂತೆ ಇತರರು ಇದ್ದರು.