ದೇಶದ ಐಕ್ಯತೆ – ಸಮಗ್ರತೆ ಬಲಪಡಿಸೋಣ’

ಶಿವಮೊಗ್ಗ, ಜ. 26: ‘ವಿವಿಧತೆಯಲ್ಲಿ ಏಕತೆಯೇ ನಮ್ಮ ಶಕ್ತಿಯಾಗಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ ನೂರಾರು ಭಾಷೆ, ಧರ್ಮ, ಪ್ರಾಂತ್ಯ, ವೈವಿಧ್ಯಮಯ ಸಂಸ್ಕೃತಿಗಳಿಂದ ಕೂಡಿರುವ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯ ಮಂತ್ರವನ್ನು
ಸಾಕಾರಗೊಳಿಸಿದೆ. ದೇಶದ ಐಕ್ಯತೆ, ಸಮಗ್ರತೆಯನ್ನು ಇನ್ನಷ್ಟು ಬಲಪಡಿಸುವ ಪಣವನ್ನು
ನಾವು ಇಂದು ತೊಡಬೇಕಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕರೆ
ನೀಡಿದ್ದಾರೆ.ನಗರದ ಡಿ.ಎ.ಆರ್. ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 72 ನೇ ಗಣ ರಾಜೋತ್ಸವ
ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಸಾರ್ವಜನಿಕರನ್ನುದ್ದೇಶಿಸಿ ಅವರು
ಮಾತನಾಡಿದರು.ಭಾರತ ಸರ್ವತಂತ್ರ ಸ್ವತಂತ್ರವಾಗಿ, ಗಣತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡು ಇದೀಗ 72
ನೇ ವರ್ಷವಾಗಿದೆ. ಭಾರತ ಪ್ರಜಾಪ್ರಭುತ್ವ ದೇಶವಾಗಿ ಘೋಷಣೆಯಾದ, ಜಗತ್ತಿನ ಅತಿದೊಡ್ಡಲಿಖಿತ ಹಾಗೂ ಪರಿಣಾಮಕಾರಿ ಸಂವಿಧಾನವನ್ನು ಜಾರಿಗೊಳಿಸಿದ ಐತಿಹಾಸಿಕ ದಿನವಿದು.
ಪ್ರತಿಯೊಬ್ಬ ನಾಗರಿಕನೂ ಸ್ವತಂತ್ರವಾಗಿ ಸ್ವಾಭಿಮಾನದಿಂದ ಬದುಕುವ ಮುಕ್ತ ಅವಕಾಶವನ್ನು
ಸಂವಿಧಾನ ನಮಗೆ ನೀಡಿದೆ ಎಂದರು.ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನ ರಚನಾ ಸಮಿತಿ, ಸಾರ್ವಕಾಲಿಕವಾಗಿ
ಪ್ರಸ್ತುತವಾದ ಆಶಯಗಳನ್ನು ಹೊಂದಿರುವ ಸಂವಿಧಾನವನ್ನು ನಮಗೆ ನೀಡಿದೆ. ನಾವುಮುಕ್ತವಾಗಿ ಬದುಕಲು ಅವಕಾಶ ಕಲ್ಪಿಸಿದೆ. ಅಂಬೇಡ್ಕರ್ ಅವರ ಈ ಮಹತ್ತರ ಕೊಡುಗೆಯನ್ನು
ಸ್ಮರಿಸುವ ನಿಟ್ಟಿನಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರಭಾವಚಿತ್ರಕ್ಕೆ ಕಡ್ಡಾಯವಾಗಿ ಗೌರವ ಸಲ್ಲಿಸುವಂತೆ ಸೂಚಿಸಿ, ರಾಜ್ಯದೆಲ್ಲೆಡೆ ಇಂದು ನಮನ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಅಂಬೇಡ್ಕರ್ ರವರು ಹೇಳಿದಂತೆ ನ್ಯಾಯವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದ. ಅವರ ಈ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಧ್ಯೇಯ ನಮ್ಮದು. ಪ್ರಜಾಪ್ರಭುತ್ವ
ವ್ಯವಸ್ಥೆಯ ಬೇರುಗಳು ದೃಢವಾಗುವುದು ಇದರಿಂದಲೇ ಎಂಬ ನಂಬಿಕೆ ನಮ್ಮದು. ದೇಶದ ಆಂತರಿಕಭದ್ರತೆ ಹಾಗೂ ಗಡಿಗಳನ್ನು ಕಾಪಾಡಿಕೊಂಡು ಶಾಂತಿ, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ
ನಾವು ಸದಾ ಸನ್ನದ್ಧರಾಗಿದ್ದೇವೆ ಎಂದರು.