ದೇಶದ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ:ಕರವೇ ಯಶಸ್ಸು

ರಾಯಚೂರು.ಜು.೦೮-ದೇಶದ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ ನೀಡಲು ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಭಾಗಶಃ ಯಶಸ್ಸುಕಂಡಿದೆ ಎಂದು ಕರವೇ ಜಿಲ್ಲಾಧ್ಯಕ್ಷ ವಿನೋದ್ ರೆಡ್ಡಿ ಎಂ ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರಮೋದಿಯವರು ಜೂ.೨೧ ರಿಂದ ದೇಶದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಕೊಡುವುದಾಗಿ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು
ಖಾಸಗಿ ಆಸ್ಪತ್ರೆಗಳಲ್ಲಿ ಶೇ.೨೫ ರಷ್ಟು ಲಸಿಕೆ ಕೊಡುವ ಕಾರ್ಯಕ್ರಮ ಮುಂದುವರೆದರೆ ಮತ್ತೆ ಕಾಳಸಂತೆ ವ್ಯವಹಾರಗಳು, ದುಬಾರಿ ಬೆಲೆಯ ಹೊರೆ, ಅನಾರೋಗ್ಯಕರ ಸ್ಪರ್ಧೆ ಏರ್ಪಡುವುದರಿಂದ, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಲಸಿಕೆ ಹಣ ಪಾವತಿಸಿ ಅಲ್ಲೂ ಸಹ ಉಚಿತವಾಗಿಯೇ ಸಾರ್ವಜನಿಕರಿಗೆ ಲಸಿಕೆ ನೀಡಬೇಕು.ಲಸಿಕೆಯೆಂಬುದು ಭಾರತದ ಪ್ರತಿಯೊಬ್ಬ ನಾಗರಿಕನ ಹಕ್ಕು. ಅದರ ಹಂಚಿಕೆಯೂ ಸಮಾನತೆಯ ಆಶಯಕ್ಕೆ ಧಕ್ಕೆಯಾಗದಂತೆ ಇರಬೇಕು. ಹೀಗಾಗಿ ಎಲ್ಲ ರಾಜ್ಯಗಳಿಗೂ ಜನಸಂಖ್ಯೆ ಆಧಾರದಲ್ಲಿ ಲಸಿಕೆ ವಿತರಣೆಯಾಗಬೇಕು. ಉತ್ತರದ ರಾಜ್ಯಗಳಿಗೆ ಹೆಚ್ಚು, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಲಸಿಕೆ ನೀಡಿದ್ದನ್ನು ನಾವು ನೋಡಿದ್ದೇವೆ ಈ ಅನ್ಯಾಯ ಕೊನೆಗೊಳ್ಳಬೇಕು.
ಪ್ರಧಾನ ಮಂತ್ರಿಗಳು ಉಚಿತವಾಗಿ ಲಸಿಕೆ ಕೊಡುವುದಾಗಿ ಘೋಷಿಸಿದ್ದರೂ, ಎಷ್ಟು ದಿನಗಳೊಳಗೆ ಲಸಿಕೆ ಕೊಡುತ್ತೇವೆ ಎಂಬುದನ್ನು ಹೇಳಿಲ್ಲ. ಮತ್ತೊಂದು ಅಲೆ ಬಂದು ಇನ್ನಷ್ಟು ಜೀವಗಳು ಹೋಗುವಂತಾದರೆ ಉಚಿತ ಲಸಿಕೆಗೆ ಅರ್ಥವಿರುವುದಿಲ್ಲ. ಕೋವಿಡ್ ಮೂರನೇ ಅಲೆ ಅಕ್ಟೋಬರ್ ನಲ್ಲಿ ಬರುವ ಸಾಧ್ಯತೆ ಇರುವುದರಿಂದ ಅಷ್ಟರೊಳಗೆ ಎರಡೂ ಡೋಸ್ ಲಸಿಕೆ ಎಲ್ಲ ನಾಗರಿಕರಿಗೂ ಸಿಗಬೇಕು.
ಈಗಾಗಲೇ ನಮ್ಮೆಲ್ಲ ಕಾರ್ಯಕರ್ತರಿಗೆ ಕರೆ ನೀಡಿದಂತೆ, ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತ, ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆಗಳನ್ನು ನಡೆಸಬೇಕು. ಈ ಮೂಲಕ ಸಮಸ್ತ ಕನ್ನಡದ ಜನತೆಗೆ ಕಾಲಮಿತಿಯೊಳಗೆ ಲಸಿಕೆ ನೀಡಿ, ಅವರಿಗೆ ಕೋವಿಡ್ ನಿಂದ ರಕ್ಷಣೆ ನೀಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.