ದೇಶದ ಉದ್ಧಾರಕ್ಕಾಗಿಯೇ ಕಾಂಗ್ರೆಸ್ ಜನನ

ದಾವಣಗೆರೆ.ಡಿ.೨೮; ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲಿಕ್ಕಾಗಿ ಮತ್ತು ಭಾರತದ ಏಳಿಗೆಗಾಗಿಯೇ ಕಾಂಗ್ರೆಸ್ ಜನ್ಮ ತಳೆದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ೧೩೫ನೇ ಸಂಸ್ಥಾಪನೆ ವರ್ಷಾಚರಣೆ ಸಮಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಕಾಂಗ್ರೆಸ್ ಸಾಕಷ್ಟು ಪ್ರಾಣ ತ್ಯಾಗ, ಬಲಿದಾನ ಮಾಡಿದೆ. ಅಲ್ಲದೇ, ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದೆ. ಆದರೆ, ಇತಿಹಾಸ ಗೊತ್ತಿಲ್ಲದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗರು ಕಾಂಗ್ರೆಸ್ ಕೊಡುಗೆ ಏನು? ಎಂಬುದಾಗಿ ಟೀಕೆ, ಟಿಪ್ಪಣಿ ಮಾಡುವ ಮೂಲಕ ಕಾಂಗ್ರೆಸ್ ಕಾಲೆಳೆಯುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಬಿಜೆಪಿಯವರು ಕಾಂಗ್ರೆಸ್ ನಿರ್ಮೂಲನೆ ಮಾಡುವುದಾಗಿ ಹೇಳುತ್ತಿದೆ. ಆದರೆ, ಅದು ಅಷ್ಟು ಸುಲಭವಲ್ಲ ಎಂದರು.ಗಾಂಧೀಜಿಯವರ ಗ್ರಾಮ ಸ್ವರಾಜ್ಯದ  ಕನಸಿನೊಂದಿಗೆ ಕಾಂಗ್ರೆಸ್ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಿದೆ ಎಂದು ಹೇಳಿದರು.ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ   ರೈತರು ದೆಹಲಿಯಲ್ಲಿ ನಿರಂತರ  ಹೋರಾಟ ನಡೆಸುತ್ತಿದ್ದರೂ ಅವರನ್ನು ಮಾತನಾಡಿಸುವ ಸೌಜನ್ಯ ತೋರದ ಮೋದಿ ಸರ್ಕಾರಕ್ಕೆ ಜನ ಮುಂದೆ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಅನಿತಾ ಮಾಲತೇಶ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಮುಖಂಡರಾದ ಕೆ.ಜಿ.ಶಿವಕುಮಾರ್, ಚಮನ್ ಸಾಬ್, ಅಯೂಬ್ ಪೈಲ್ವಾನ್ ಮತ್ತಿತರರಿದ್ದರು.