ದೇಶದ ಆರ್ಥಿಕ ಸ್ಥಿತಿ ಕಳವಳಕಾರಿ;ಚಿದು

ಉದಯಪುರ,ಮೇ ೧೪- ಪ್ರಧಾನಿ ನರೇಂದ್ರಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ದೇಶದ ಆರ್ಥಿಕ ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ ಎದು ಕಿಡಿಕಾರಿದ್ದಾರೆ.
ಜಾಗತಿಕ ಮತ್ತು ದೇಶೀಯ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಂಡು ಆರ್ಥಿಕ ನೀತಿಗಳ ಮರು ಹೊಂದಾಣಿಕೆ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಉದಯಪುರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ೮ ವರ್ಷಗಳಲ್ಲಿ ನಿಧಾನಗತಿಯ ಬೆಳವಣಿಗೆಯು ಪ್ರಸ್ತುತ ಕೇಂದ್ರ ಸರ್ಕಾರ ಆಲ್‌ಮಾರ್ಕ್ ಆಗಿದೆ. ಮಾರಕ ಕೊರೊನಾ ನಂತರ ಆರ್ಥಿಕ ಚೇತರಿಕೆ ಆಲಸ್ಯ ಹಾಗೂ ಸ್ಥಗಿತಗೊಂಡಿವೆ ಎಂದು ದೂರಿದರು.
೨೦೧೭ರಲ್ಲಿ ಮೋದಿ ನೇತೃತ್ವದ ಸರ್ಕಾರ ಅನುಷ್ಠಾನಕ್ಕೆ ತಂದ ಕಳಪೆ ಕರಡು ಮತ್ತು ಅನ್ಯಾಯದ ಜಿಎಸ್‌ಟಿ ಕಾನೂನುಗಳ ಪರಿಣಾಮಗಳನ್ನು ಎಲ್ಲರೂ ನೋಡುತ್ತಿದ್ದಾರೆ. ೧೦ ವರ್ಷಗಳ ಅವಧಿಯಲ್ಲಿ ಸಂಪತ್ತು ಸೃಷ್ಟಿ, ಉದ್ಯೋಗ, ಬಡವರನ್ನು ಬಡತನದಿಂದ ಮೇಲೆತ್ತುವ ಕೆಲಸಗಳು ವಿಫಲವಾಗಿವೆ ಎಂದು ತರಾಟೆಗೆ ತೆಗೆದುಕೊಂಡರು.
ಮೂರು ದಿನಗಳ ಕಾಲ ಚಿಂತನಾ ಶಿಬಿರದಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ರಚಿಸಿರುವ ಸಮಿತಿಯಲ್ಲಿ ಚಿದಂಬರಂ ಅಧ್ಯಕ್ಷರಾಗಿದ್ದಾರೆ.