ದೇಶದ ಆರ್ಥಿಕ ಬೆಳವಣಿಗೆಗೆ ಕೃಷಿ ಬೆನ್ನೆಲುಬು

ಸಿಎಂ ವಿಶ್ಲೇಷಣೆ

ನಗರದಲ್ಲಿ ಇಂದು ನಡೆದ ಎಲ್ಲಾ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಮನ್‌ಸುಖ್ ಮಾಂಡವೀಯ, ಶೋಭಾ ಕರಂದ್ಲಾಜೆ, ಕೈಲಾಶ್ ಚೌಧರಿ ಹಾಗೂ ಮತ್ತಿತರರು ಭಾಗವಹಿಸಿರುವುದು.

ಬೆಂಗಳೂರು,ಜು.೧೪-ದೇಶದ ಆರ್ಥಿಕತೆಗೆ ಪ್ರಮುಖ ಚಾಲನಾ ಶಕ್ತಿ ಕೃಷಿ, ಕೃಷಿ ವಲಯ ದೇಶದ ಆರ್ಥಿಕತೆ ಇಂಜಿನ್‌ಗೆ ಇಂಧನದಂತೆ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ಲೇಷಿಸಿದರು.
ಬೆಂಗಳೂರಿನಲ್ಲಿಂದು ನಡೆದ ಎಲ್ಲ ರಾಜ್ಯಗಳ ಕೃಷಿ ಮತ್ತು ತೋಟಗಾರಿಕಾ ಸಚಿವರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ವಲಯ ಬೆಳವಣಿಗೆಯಾದಷ್ಟು ಆರ್ಥಿಕತೆ ಸದೃಢವಾಗುತ್ತದೆ. ಹಾಗಾಗಿ ಆರ್ಥಿಕತೆಯ ಇಂಜಿನ್‌ಗೆ ಕೃಷಿ ಚಾಲನಾ ಶಕ್ತಿ ಎಂದರು.
ದೇಶದಲ್ಲಿ ಶೇ. ೧ರಷ್ಟು ಕೃಷಿ ಕ್ಷೇತ್ರದ ಬೆಳವಣಿಗೆಯಾದರೆ ಶೇ. ೪ರಷ್ಟು ಉತ್ಪಾದಕ ವಲಯ, ಶೇ. ೧೦ ರಷ್ಟು ಸೇವಾವಲಯದ ಬೆಳವಣಿಗೆಯಾಗುತ್ತದೆ. ಹಾಗಾಗಿ, ಕೃಷಿಯೇ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ ಎಂದರು.
ದೇಶದಲ್ಲಿ ಐಟಿ-ಬಿಟಿ ವಲಯ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಶಕ್ತಿ ನೀಡುತ್ತಿದ್ದರೂ ಮೂಲ ಚಾಲನಾ ಶಕ್ತಿ ಕೃಷಿಯೇ ಎಂದರು.
ಕೃಷಿ ಇತರ ವೃತ್ತಿಗಳಂತಲ್ಲ, ಇದು ದೇಶದ ಸಂಸ್ಕೃತಿ, ದೇಶವನ್ನು ಒಗ್ಗೂಡಿಸುವ, ಐಕ್ಯತೆಯನ್ನು ಬಲಗೊಳಿಸುವ ಶಕ್ತಿ ಕೃಷಿ ಎಂದರು.
ಸ್ವಾತಂತ್ರ್ಯಾ ನಂತರ ನಾವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿ ಆಹಾರ ಭದ್ರತೆಯನ್ನು ಹೊಂದಲು ಸಾಧ್ಯವಾಗಿದೆ. ಇದಕ್ಕೆ ರೈತರು, ಕೃಷಿ ವಿಜ್ಞಾನಿಗಳು ಕಾರಣ ಎಂದರು.
ಕೃಷಿಯಲ್ಲಿ ಪ್ರಗತಿ ಸಾಧಿಸಿದ್ದರೂ ರೈತರ ಸ್ಥಿತಿಗತಿಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಸಬಲರನ್ನಾಗಿಸುವ ಅಗತ್ಯವಿದ್ದು, ಪ್ರಧಾನಿ ನರೇಂದ್ರಮೋದಿ ಅವರು ರೈತ ಪರ ನೀತಿಗಳನ್ನು ಜಾರಿ ಮಾಡಿದ್ದಾರೆ. ಕಳೆದ ೭-೮ ವರ್ಷಗಳಲ್ಲಿ ರೈತರ ಕಲ್ಯಾಣಕ್ಕೆ ಹಲವು ಯೋಜನೆಗಳು ಜಾರಿಯಾಗಿವೆ ಎಂದರು.
ರಾಜ್ಯಸರ್ಕಾರ ಸಹ ರೈತರ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಸರ್ಕಾರದ ರೈತಪರ ಯೋಜನೆಗಳಿಂದ ಕೃಷಿ ಕ್ಷೇತ್ರ ಬೆಳವಣಿಗೆ ಹೊಂದಿದೆ ಎಂದರು.
ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಡೀ ದೇಶದಲ್ಲೇ ಮಾದರಿ ಎಂಬಂತೆ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದರು.
ಹಾಲು ಉತ್ಪಾದಕರಿಗೆ ನೆರವಾಗುವ ನಿಟ್ಟಿನಲ್ಲಿ ಕ್ಷೀರಬ್ಯಾಂಕ್‌ನ್ನು ರಾಜ್ಯದಲ್ಲಿ ಆರಂಭಿಸಲಾಗುತ್ತಿದೆ. ಕ್ಷೀರಬ್ಯಾಂಕ್ ಮೂಲಕ ಹಾಲು ಉತ್ಪಾದಕರಿಗೆ ಅಗತ್ಯವಾದ ಸಾಲ ಮತ್ತಿತರ ನೆರವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರೈತರಿಗಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ’ಕೃಷಿ ಸಮ್ಮಾನ್’ ಯೋಜನೆಗೆ ರಾಜ್ಯಸರ್ಕಾರವು ಕೈಜೋಡಿಸಿ ಕೇಂದ್ರದ ೬ ಸಾವಿರ ರೂ.ಗಳ ಜತೆಗೆ ರಾಜ್ಯಸರ್ಕಾರ ೪ ಸಾವಿರ ರೂ.ಗಳನ್ನು ರೈತರಿಗೆ ನೀಡುವ ಮೂಲಕ ರೈತಪರ ಬದ್ಧತೆಯನ್ನು ತೋರಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್, ಕೃಷಿ ಖಾತೆ ರಾಜ್ಯಸಚಿವರಾದ ಶೋಭಾಕರಂದ್ಲಾಜೆ, ಕೈಲಾಶ್ ಚೌಧರಿ, ಕೇಂದ್ರದ ಆರೋಗ್ಯ ಮತ್ತು ರಸಗೊಬ್ಬರ ಸಚಿವ ಮನ್ಸುಕ್ ಮಾಂಡವಿಯಾ, ರಾಜ್ಯದ ಕೃಷಿ ಸಚಿವ ಬಿ.ಸಿ ಪಾಟೀಲ್, ತೋಟಗಾರಿಕಾ ಸಚಿವ ಮುನಿರತ್ನ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.