ದೇಶದ ಅಭಿವೃದ್ಧಿಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನವರ ಪಾತ್ರ ಹಿರಿದು – ನಾಗನಗೌಡ.

ಸಂಜೆವಾಣಿ ವಾರ್ತೆ
 ಕೂಡ್ಲಿಗಿ.ಸೆ.16 :- ದೇಶದ ಅಂಕು ಡೊಂಕು ತಿದ್ದುವ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯವೆಂಬಂತೆ ಇಂದು ದೇಶವು  ಅಭಿವೃದ್ಧಿ ಕಂಡಿದ್ದರೆ  ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ ಅಪಾರ ಜ್ಞಾನ ಪರಿಕಲ್ಪನೆಯ  ಅನೇಕ ಕಾರ್ಯಗಳು ಹಾಗೂ ನಂತರದ ಈ ದಿನಗಳಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನವರ  ಹಾದಿಯಲ್ಲಿ   ಸಾಗುವ ಅಪಾರ ಇಂಜಿನಿಯರ್ ಗಳ ಶ್ರಮದ ಪಾತ್ರ  ಹಿರಿಯದಾಗಿದೆ ಎಂದು ಕೂಡ್ಲಿಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ನಾಗನಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಮಹಾತ್ಮಾ ಗಾಂಧೀಜಿ ಚಿತಾಭಸ್ಮದ ರಾಷ್ಟ್ರೀಯ ಹುತಾತ್ಮರ ಸ್ಮಾರಕದ ಆವರಣದಲ್ಲಿ ಗಾಂಧಿ ಸ್ಮಾರಕ ಸಮಿತಿ, ಮೈದಾನ ಗೆಳೆಯರ ಬಳಗ ಹಾಗೂ ಜೆಸಿಐ ಕೂಡ್ಲಿಗಿ ಗೋಲ್ಡನ್ ರವರ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಚಿಂತನ – ಚೇತನ ಸರಣಿ ಕಾರ್ಯಕ್ರಮದಲ್ಲಿ ವಿಶ್ವ ಅಭಿಯಂತರ ದಿನಾಚರಣೆಯ ಅಂಗವಾಗಿ ಸರ್ ಎಂ ವಿಶ್ವೇಶ್ವರಯ್ಯನವರ ಜ್ಞಾನದರ್ಶಗಳ ಕುರಿತು ಮಾತನಾಡುತ್ತ ಬಡತನದಲ್ಲಿ ಹುಟ್ಟಿಬೆಳೆದ ವಿಶ್ವೇಶ್ವರಯ್ಯ ದೇಶದ ಅಭಿವೃದ್ಧಿಯ ಬಗ್ಗೆ ಮುಂದಾಲೋಚನೆಯ ಕನಸುಕಂಡಿದ್ದರು ಅವರು ಒಂದು ದೇಶವು ಆರ್ಥಿಕವಾಗಿ ಮುಂದಾಗಬೇಕಾದರೆ ಕಾರ್ಖಾನೆಗಳು, ನೀರಾವರಿ, ಕೃಷಿ, ರಸ್ತೆ ಅಭಿವೃದ್ಧಿ, ಬ್ಯಾಂಕಿನ ಪರಿಕಲ್ಪನೆ ಇನ್ನಿತರೆ ಕಾರ್ಯಗಳ ಬಗ್ಗೆ ಆಪಾರ ಜ್ಞಾನ ಬಳಸಿಕೊಂಡು ದೇಶದ ಅಭಿವೃದ್ಧಿ ಕಾಣುವಂತೆ ಮಾಡಿ ಅಮೇರಿಕಾದಂತಹ ವಿದೇಶಿಯ ಡ್ಯಾಮ್ ಒಂದಕ್ಕೆ ನೀಲಾನಕ್ಷೆ ಹಾಕಿ ವಿದೇಶದಲ್ಲಿ ಹೆಸರು ಮಾಡಿದ ಸರ್ ಎಂ ವಿಶ್ವೇಶ್ವರಯ್ಯ ನಮ್ಮ ನಾಡಿನ ಹೆಮ್ಮೆ ಎಂದರು ಅವರು ಹಾಕಿದ ಅನೇಕ ಯೋಜನೆಗಳನ್ನು ಸಹ ಅವರ ಪರಿಕಲ್ಪನೆ ಆಧಾರದಲ್ಲಿ ಇಂದಿಗೂ ಅನೇಕ ಅಭಿವೃದ್ಧಿ ಕೆಲಸವನ್ನು ಇಂಜಿನಿಯರ್ ಗಳು ಮಾಡುತ್ತಿದ್ದಾರೆ ಎಂದರು.
 ಸರ್ ಎಂ ವಿಶ್ವೇಶ್ವರಯ್ಯ ಅವರ ಜೀವಿತಾವಧಿಯಲ್ಲಿ ಬಾಂಬೆ ಸರ್ಕಾರದಲ್ಲಿ ಸಹಾಯಕ ಅಭಿಯಂತರರಾಗಿ ಕುಡಿಯುವ ನೀರು, ರಸ್ತೆ ನಿರ್ಮಿಸಿದರು ನಂತರ ಪುಣೆ ಸರೋವರಕ್ಕೆ ಅವರ ಪರಿಕಲ್ಪನೆಯ ಹೊಸ ತಂತ್ರಜ್ಞಾನದ ಬಳಕೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದಲ್ಲಿ ಗೇಟ್ ಗಳು ಅಟೋಮ್ಯಾಟಿಕ್ಕಾಗಿ ತೆರೆಯುವ ನೀರಿನ ಪ್ರಮಾಣ ಕಡಿಮೆಯಾದಲ್ಲಿ ಗೇಟ್ ಮುಚ್ಚುವ ಪರಿಕಲ್ಪನೆಯ ಸ್ಲೀಟ್ ಗೇಟ್ ನಿರ್ಮಿಸಿದ ದೇಶದ ಮೊದಲ ರೂವಾರಿ ವಿಶ್ವೇಶ್ವರಯ್ಯ ನವರದ್ದಾಗಿದ್ದು ಇದೇ ತಂತ್ರಜ್ಞಾನವನ್ನು ಮೈಸೂರಿನ ಕೆ ಆರ್ ಎಸ್ ಗೆ ಬಳಸಲಾಗಿದೆ ಮತ್ತು ಅಂದು  ಕನ್ನಂಬಾಡಿ ಆಣೆಕಟ್ಟು ವಿಶ್ವೇಶ್ವರಯ್ಯ ಕಟ್ಟದಿದ್ದರೆ ಇಂದು ಮೈಸೂರು ಮಂಡ್ಯ ಇತರೆ ಭಾಗಗಳು ಬರದ ನಾಡಾಗಿರುತಿತ್ತು ಎಂದು ಹೇಳಬಹುದಾಗಿದೆ ಎಂದರು ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ನವರ ಸಮಯಪ್ರಜ್ಞೆ, ಶ್ರದ್ದೆ, ಸೇವೆ, ಶ್ರಮ, ನೀತಿ ಮಹತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾಗಿದೆ ಇನ್ನೂ ದೇಶದ ಅಭಿವೃದ್ಧಿ ಚಿಂತನೆ ಹೆಚ್ಚಿಸುವಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ನಾಗನಗೌಡ ತಿಳಿಸಿದರು.
ಪುಟ್ಟರಾಜಗವಾಯಿಗಳ ಪುಣ್ಯಸ್ಮರಣೆಯಾಗಿ ಕೂಡ್ಲಿಗಿ ಸಂಗೀತಾ ಶಿಕ್ಷಕಿ ರೋಜಾರಾಣಿ ಅವರ ಗಾನಸುಧೆಗೆ ವೀರೇಶ ತಬಲಾ ಸಾಥ್ ನೀಡಿದರು.ಉಪನ್ಯಾಸಕ ನಾಗರಾಜ, ವಿವೇಕಾನಂದ ಕಾರ್ಯಕ್ರಮ ನಿರೂಪಿಸಿದರು ಗಾಂಧಿ ಸ್ಮಾರಕ ಸಮಿತಿ ಡಿ. ನಾಗರಾಜ, ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಗನಗೌಡ ಹಾಗೂ ಅಭಿಯಂತರುಗಳಿಗೆ ಪುಸ್ತಕ ಕೊಡುಗೆಯ ಪ್ರಾಯೋಜಕರಾದ ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ವಿಜಯಕುಮಾರ ಅವರಿಂದ ಪುಸ್ತಕವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗಾಂಧಿ ಸ್ಮಾರಕ ಸಮಿತಿ, ಮೈದಾನ ಗೆಳೆಯರ ಬಳಗ ಹಾಗೂ ಜೆಸಿಐ ಕೂಡ್ಲಿಗಿ ಗೋಲ್ಡನ್ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Attachments area