ಬೀದರ್:ಅ.21: ದೇಶದ ಅಭಿವೃದ್ಧಿಯಲ್ಲಿ, ಅಲ್ಲಿಯ ಅಡಳಿತ ಸುಧಾರಣೆಯಲ್ಲಿ ಹಾಗೂ ಆಂತರಿಕ ಕಾನೂನು ಸುರಕ್ಷತೆಯಲ್ಲಿ ಪೋಲಿಸರ ಶ್ರಮ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಇಂದು ನಗರದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳ ಕವಾಯತು ಮೈದಾನದಲ್ಲಿ ಜರುಗಿದ ಪೋಲಿಸ್ ಹುತಾತ್ಮ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಯಾವ ದೇಶದಲ್ಲಿ ಪೋಲಿಸರು ಬಲಿಷ್ಟರಾಗಿರಾತ್ತಾರೊ ಆ ದೇಶ ಸುಭದ್ರವಾಗಿರುತ್ತದೆ. ಪೋಲಿಸ್ ವ್ಯವಸ್ಥೆ ಅಭದ್ರವಾಗಿದ್ದರೆ ಆ ದೇಶ ಎಲ್ಲ ರೀತಿಯಲ್ಲಿ ದಿವಾಳಿಯಾಗಿರುವುದರಲ್ಲಿ ಸಂದೇಹವಿಲ್ಲವೆಂದರು.
ಇಂದು ಇಡೀ ದೇಶ ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ ಗಡಿಯಲ್ಲಿ ಸೈನಿಕರು ಹಾಗೂ ಆಂತರಿಕವಾಗಿ ಪೋಲಿಸರೆ ಮುಖ್ಯ ಕಾರಣ. ತಮ್ಮ ಜೀವದ ಹಂಗು ತೊರೆದು ಅವರು ಮಾಡುವ ಕಾರ್ಯ ಎಲ್ಲ ಸಮಾಜಗಳು ಗೌರವಿಸಿ ಪ್ರೋತ್ಸಾಹಿಸಬೇಕಿದೆ ಎಂದರು.
ಇಂದಿರಾ ಗಾಂಧಿಜಿಯವರ ತುರ್ತು ಪರಿಸ್ಥಿತಿ ಘೋಷಣೆ ವಿಚಾರವಾಗಿ ಪ್ರಸ್ತಾಪಿಸಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿಜಿಯವರು ತೋಘಲಕ ನಾಟಕ ವಿಕ್ಷಿಸಿ ಅವರ ಮನ ಪರಿವರ್ತನೆಯಾಗಿ ಕೂಡಲೇ ಕಚೇರಿಗೆ ಬಂದು ತುರ್ತು ಪರಿಸ್ಥಿತಿ ಘೋಷಣೆ ಹಿಂಪಡೆದಿರುವ ವಿಚಾರ ಸ್ವತ ಅವರೆ ಹಂಚಿಕೊಂಡಿರುವುದನ್ನು ಉಲ್ಲೆಖಿಸಿ, ದೇಶ ಆಂತರಿಕವಾಗಿ ದುರ್ಬಲವಾಗಿದೆ ಎಂದರೆ ಅಲ್ಲಿ ಪೋಲಿಸರ ವೈಫಲ್ಯವೇ ಇದ್ದು ತೋರುತ್ತದೆ. ಇಡೀ ದೇಶದಲ್ಲಿ ಪೋಲಿಸ್ ಸುಧಾರಣೆಯಲ್ಲಿ ಕರ್ನಾಟಕ ರಾಜ್ಯ ಐದನೇ ಸ್ಥಾನಕ್ಕಿದ್ದುದು ಈಗ ಎರಡನೇ ಸ್ಥಾನಕ್ಕೆ ತಲುಪಿರುವುದು ನಮಗೆ ಹೆಮ್ಮೆ ಇದೆ. ಅವರ ಜನಪರ ಕಾಳಜಿ ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ಬಗ್ಗು ಬಡೆಯುವ ಔದಾರ್ಯ ಹೀಗೆ ಮುಂದುವರೆಯಲಿ, ಅವರ ಪ್ರಾಮಾಣಿಕ ಮತ್ತು ಪಾರದರ್ಶಕ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ.ಎಸ್.ಎಲ್ ಒಂದು ವರ್ಷದಲ್ಲಿ ಇಡೀ ದೇಶದಲ್ಲಿ ಹುತಾತ್ಮರಾದ ಸೈನಿಕರ ಹಾಗೂ ಪೋಲಿಸರ ಯಾದಿ ಓದಿದರಲ್ಲದೇ ಚೀನಾ ಗಡಿಯಲ್ಲಿ ಕಮಾಂಡರ್ ಕರಣಸಿಂಗ್ ಹಾಗೂ ಅವರ 10 ಜನ ಸಹಚರರು ಚೀನಾದೊಂದಿಗಿನ ಸಂಘರ್ಷದಲ್ಲಿ ಹುತಾತ್ಮರಾದ ಬಗೆ ತಿಳಿಸಿ, ಅಂದಿನಿಂದ ಪೋಲಿಸ್ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳುತ್ತಿರುವ ಪರಿ ವಿವರಿಸಿದರು. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ.ಎಂ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಮುರಗೇಸನ್, ಹೆಚ್ಚುವರಿ ಎಸ್.ಪಿ ಮಹೇಶ ಮೇಘಣ್ಣನವರ್ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖರಾದ ಗುಇರುನಾಥ ಕೊಳ್ಳುರ್, ಡಾ.ಅಬ್ದುಲ್ ಖದೀರ್, ಡಾ.ಬಲಬೀರಸಿಂಗ್, ಪೂರ್ಣಿಮಾ.ಜಿ, ರಾಜೇಂದ್ರಕುಮಾರ ಗಂದಗೆ, ಡಿ.ಕೆ ಗಣಪತಿ, ಬಾಬು ವಾಲಿ, ಶಿವಶರಣಪ್ಪ ವಾಲಿ, ಅಬ್ದುಲ್ ಅಲಿ, ರಾಜಕುಮಾರ ಸ್ವಾಮಿ ಸೇರಿದಂತೆ ಹಲವರು ಹುತಾತ್ಮರಾದ ಪೋಲಿಸ್‍ರಿಗೆ ಪುಷ್ಪನಮನ ಸಲ್ಲಿ ಶೃದ್ದಾಂಜಲಿ ಸಲ್ಲಿಸಿದರು. ಜಿಲ್ಲೆಯ ಎಲ್ಲ ಹಿರಿಯ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅವರ ಕುಟುಂಬಸ್ತರು, ನಿವೃತ್ತ ಪೋಲಿಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.