ಕೋಲಾರ, ಜು,೫-ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ ಶಿಕ್ಷಣವನ್ನು ಒದಗಿಸಲು ವಿಶ್ವವಿದ್ಯಾಲಯಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರ ಹೊರವಲಯದ ಹೆದ್ದಾರಿಯಲ್ಲಿನ ನಂದಿನಿ ಪ್ಯಾಲೇಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೩ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಮತ್ತಷ್ಟ್ಟು ಅಭಿವೃದ್ಧಿಗೊಳಿಸಬೇಕು. ಸೈಬರ್ ಅಪರಾಧಗಳನ್ನು ತಪ್ಪಿಸಲು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ವಿಶ್ವವಿದ್ಯಾಲಯದ ಕುಲಪತಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಇಂದಿನ ಸಮಯವು ತಂತ್ರಜ್ಞಾನವಾಗಿದೆ. ದೇಶದ ಅಭಿವೃದ್ಧಿಯಲ್ಲಿ ತಾಂತ್ರಿಕ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ತಾಂತ್ರಿಕ ಗುಣಮಟ್ಟದ ಶಿಕ್ಷಣವು ಖಂಡಿತವಾಗಿಯೂ ಯುವಕರಿಗೆ ಕೌಶಲ್ಯ ಮತ್ತು ಶ್ರೇಷತೆಯನ್ನು ಒದಗಿಸುತ್ತದೆ. ಯುವಕರನ್ನು ನುರಿತರನ್ನಾಗಿಸುವ ಮೂಲಕ ಮಾತ್ರ ನಾವು ಸ್ಥಳೀಯ ಮತ್ತು ಆತ್ಮನಿರ್ಭರ ಭಾರತಕ್ಕಾಗಿ ಧ್ವನಿ ನೀಡುವ ದಿಕ್ಕಿನಲ್ಲಿ ಮುನ್ನಡೆಯಬಹುದು ಎಂದು ಹೇಳಿದರು.
ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳಿಗೆ ಗೌರವ ಪದವಿ ನೀಡಿ ಗೌರವಿಸಿದೆ. ಅವರ ಅತ್ಯುತ್ತಮ ಸಾಧನೆಗಳಿಗಾಗಿ ಮತ್ತು ಮಾನವ ಸಮಾಜದ ಪ್ರಗತಿಗೆ, ಮಹತ್ವದ ಕೊಡುಗೆಗಾಗಿ ಅಭಿನಂದಿಸುತ್ತೇನೆ ಮತ್ತು ಉಜ್ವಲ ಭವಿಷವನ್ನು ಹಾರೈಸುತ್ತೇನೆ. ಜನರು ಮತ್ತು ದೇಶದ ಹಿತದೃಷ್ಟಿಯಿಂದ ಸಮಾಜಕ್ಕಾಗಿ ನಿಮ್ಮ ಸೇವೆ ನಿರಂತರವಾಗಿರಲಿ ಎಂದು ಮನವಿ ಮಾಡಿದರು.
ಈ ದಿನ ಅನೇಕ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲಾಗಿದೆ. ಅನೇಕ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ ಮತ್ತು ಪಿಎಚ್.ಡಿ ಪದವಿಗಳನ್ನು ಸಹ ಸ್ವೀಕರಿಸಿದ್ದಾರೆ. ನೀವು ಪಡೆದ ಶಿಕ್ಷಣವನ್ನು ಇತರರಿಗೆ ನೀಡಲು ಪ್ರಯತ್ನಿಸಿದೆ, ನಿಮ್ಮ ಜವಾಬ್ದಾರಿಯು ಹೆಚ್ಚಿದೆ. ಮತ್ತು ಮುಂಬರುವ ವಿದ್ಯಾರ್ಥಿಗಳು ನಿಮ್ಮಿಂದ ಸ್ಫೂರ್ತಿ ಪಡೆಯುವ ರೀತಿಯಲ್ಲಿ ಮುನ್ನಡೆಯಬೇಕು. ಸ್ವಾಮಿ ವಿವೇಕಾನಂದರು ಯುವಕರೇ ಎದ್ದೇಳಲು, ಎಚ್ಚರಗೊಳ್ಳಲು ಮತ್ತು ಗುರಿಯನ್ನು ಸಾಧಿಸುವವರೆಗೆ ನಿಲ್ಲಬೇಡಿ ಸಂದೇಶವನ್ನು ಕರೆ ನೀಡಿದ್ದರು, ಅದನ್ನು ಪರಿಪಾಲಿಸಿ. ಅವರು ತೋರಿರುವ ಅದರ್ಶದ ಮಾರ್ಗವನ್ನು ಅನುಸರಿಸುವ ಮೂಲಕ, ನೀವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಗೊಳಿಸಿಕೊಳ್ಳಿ. ಈ ಕೆಲಸದಲ್ಲಿ ವಿಶ್ವವಿದ್ಯಾಲಯದಿಂದ ಪಡೆದ ಶಿಕ್ಷಣ ಮತ್ತು ಬಲವಾದ ನೈತಿಕ ಅಡಿಪಾಯವು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ನವ ಭಾರತ, ಶ್ರೇಷ್ಟ ಭಾರತ, ಆತ್ಮನಿರ್ಭರ ಭಾರತ್ ಮಾಡಲು ಸಂಕಲ್ಪ ಮಾಡಿದ್ದಾರೆ. ಅತ್ಯುತ್ತಮ ಭಾರತ, ಸ್ವಾವಲಂಬಿ ಭಾರತ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ, “ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ” ಎಂಬ ಮನೋಭಾವದಿಂದ ಪ್ರೇರಿತವಾದ “ವಸುಧೈವ ಕುಟುಂಬಕಂ” ತತ್ವಶಾಸ್ತ್ರ ಮತ್ತು ಧ್ಯಾನವನ್ನು ಕೇಂದ್ರೀಕರಿಸಿ, ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಕಲಿಸುತ್ತದೆ ಎಂದು ತಿಳಿಸಿದರು.
ಉನ್ನತ ಸಿಕ್ಷಣ ಸಚಿವರಾದ ಡಾ. ಎಂ.ಸಿ.ಸುಧಾಕರ್ ಅವರು ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಪಠ್ಯದಲ್ಲಿ ಬದಲಾವಣೆ ತರುವ ಅಗತ್ಯವಿದೆ. ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿದರೆ ವಿದ್ಯಾರ್ಥಿಗಳು ಭವಿಷ್ಯಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತಜ್ಞರ ಜತೆ ಚರ್ಚಿಸಲಾಗುತ್ತಿದೆ. ದಿಢೀರನೆ ವ್ಯವಸ್ಥೆ ಬದಲಿಸುತ್ತೇವೆ ಎಂದು ಹೇಳಲಾಗದು. ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸಿ ದೇಶ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.
ಅವಿಭಜಿತ ಕೋಲಾರ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯಕ್ಕಾಗಿ ನಾವೆಲ್ಲ ಪ್ರಯತ್ನಿಸಿದ್ದೆವು. ಅದೀಗ ದಕ್ಕಿದೆ. ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವನಾಗಿ ಭಾಗವಹಿಸಿರುವುದು ಸಂತಸ ತಂದಿದೆ. ಅಮರಾವತಿ ಗ್ರಾಮದ ಬಳಿ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಕಟ್ಟಡಗಳ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಳ್ಳಬೇಕಿದೆ. ಪದವಿ, ಸ್ನಾತಕೋತ್ತರ ಪದವಿ ಪಡೆದು ನಿಮ್ಮ ಭವಿಷ್ಯದ ಜತೆಗೆ ದೇಶದ ಭವಿಷ್ಯ ರೂಪಿಸುವ ಘಟ್ಟದಲ್ಲಿ ನೀವಿದ್ದೀರಿ. ಪಾಲಕರು, ಗುರುಹಿರಿಯರು, ಹುಟ್ಟಿದ ಊರಿಗೆ ಕೀರ್ತಿ ತರುವಂತೆ ನಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮೂವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೋಲಾರದ ಹಿರಿಯ ಪತ್ರಕರ್ತ ಸಂಚಿಕೆ ದಿನಪತ್ರಿಕೆಯ ಸಂಪಾದಕ ಸಿ.ಎಂ.ಮುನಿಯಪ್ಪ, ಹರೀಶ್‌ಹಂದೆ ಹಾಗೂ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ಗೌರವ ಡಾಕ್ಟರೇಟ್ ಹಾಗೂ ೪೪ ಮಂದಿ ರ್‍ಯಾಂಕ್, ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಪದವಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಖ್ಯಾತ ಪರಿಸರ ಮತ್ತು ಅಭಿವೃದ್ಧಿ ಪತ್ರಕರ್ತರಾದ ಡಾ. ಪಿ.ಸಾಯಿನಾಥ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ನಿರಂಜನ, ಕುಲಸಚಿವ (ಮೌಲ್ಯಮಾಪನ) ಪ್ರೊ. ಡೊಮಿನಿಕ್. ಡಿ, ಕುಲಸಚಿವರು (ಆಡಳಿತ) ಪ್ರೊ. ನರಸಿಂಹಮೂರ್ತಿ. ಎನ್. ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.