ದೇಶದ ಅಭಿವೃದ್ಧಿಗೆ ಯುವಕರ ಪಾತ್ರ ಮಹತ್ವ

ಕೆ.ಆರ್.ಪುರ, ಮಾ.೨೪- ದೇಶದ ಸರ್ವತೋಮುಖ ಅಭಿವೃದ್ಧಿಗೆ ಯುವಕರ ಪಾತ್ರ ಮಹತ್ವದಾಗಿದೆ ಎಂದು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾವಿವೇಕಾನಂದ ಬಾಬು ಅವರು ತಿಳಿಸಿದರು.
ಕೆ.ಆರ್.ಪುರ ಕ್ಷೇತ್ರದ ವಿಜ್ಞಾನನಗರ ವಾಡ್೯ನಲ್ಲಿ ಬಲಿದಾನ ದಿನದ ಅಂಗವಾಗಿ ಯುವಮೋರ್ಚಾ ವತಿಯಿಂದ ಏರ್ಪಡಿಸಿದ್ದ ಪಂಜಿನ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವ ಪೀಳಿಗೆ ದೇಶದ ಸಂಪತ್ತಾಗಿದ್ದು, ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮನವಿ ಮಾಡಿದರು. ದೇಶದ ಉಜ್ವಲ ಭವಿಷ್ಯ ಯುವಜನತೆ ಮೇಲಿದೆ, ಯುವ ಜನತೆ ಸಂಶೋಧನೆಗಳತ್ತ ಗಮನ ಹರಿಸುವಂತೆ ನುಡಿದರು.
ದೇಶಕ್ಕಾಗಿ ಪ್ರಾಣ ನೀಡಿದ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಸರ್ಮಪಣೆ ದಿನವನ್ನು ಬಲಿದಾನ ದಿವಾಸ ಎಂದು ಆಚರಿಸಲಾಗುತ್ತಿದ್ದು ಮಹಾನ್ ನಾಯಕರ ಸ್ಮರಣೆ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಮಹಾನ್ ನಾಯಕರ ತತ್ವ ಸಿದ್ದಾಂತಗಳನ್ನು ಪಾಲಿಸುವ ಮೂಲಕ, ನಾವು ದೇಶದ ಸೇವೆಗೆ ಸದಾ ಮುಂದಿರಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಎಸ್.ಜಿ.ನಾಗರಾಜ್, ಬೆಂಗಳೂರು ಉತ್ತರ ಯುವಮೋರ್ಚಾ ಉಪಾಧ್ಯಕ್ಷ ಬಾಲುಬಾಲಾಜಿ, ವಾಡ್೯ನ ಅಧ್ಯಕ್ಷ ಲೋಕೆಶ್ ಗೌಡ, ಯುವಮೋರ್ಚಾ ಅಧ್ಯಕ್ಷ ಯಶಸ್ ರೆಡ್ಡಿ, ಮುಖಂಡರಾದ ಬಾಲುಬಾಲಾಜಿ, ಮಂಜುನಾಥ್, ಗೋಕುಲ್, ಮಾರುತಿ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.