ದೇಶದ ಅಭಿವೃದ್ಧಿಗಾಗಿ ಕ್ರಿಯಾಶೀಲರಾಗಬೇಕು :ಪ್ರೊ. ದಯಾನಂದ ಅಗಸರ

ಕಲಬುರಗಿ :ಅ.2: ಮಹಾತ್ಮ ಗಾಂಧೀಜಿಯವರ ಸರಳ ಜೀವನ ವ್ಯಕ್ತಿತ್ವ ಕೇವಲ ಆಚರಣೆಯಾಗದೆ ಅವುಗಳನ್ನು ಅಳವಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಗಾಗಿ ಪರಿವರ್ತನೆಯ ಶಕ್ತಿಯಾಗಿ ಶ್ರಮಿಸಲು ಕ್ರಿಯಾಶೀಲರಾಗಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸೋಮವಾರ ‘ಮಹಾತ್ಮ ಗಾಂಧಿ ಜಯಂತಿ’ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆ ಸಾಕಾರಗೊಳ್ಳಲು ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದುದ್ದಕ್ಕೂ ಸ್ವಚ್ಛತೆ ಮತ್ತು ಅಹಿಂಸ ನಿಯಮಗಳನ್ನು ಪಾಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದ ಅವರು ಗಾಂಧೀಜಿ ಅವರ ಜೀವನ ತತ್ವಗಳನ್ನು ಎಲ್ಲರು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಇದಕ್ಕೂ ಮುನ್ನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯದ ಕಾರ್ಯಸೌಧದ ಎದುರುಗಡೆ ಸ್ವಚ್ಛತಾ ಕಾರ್ಯಕ್ರಮ ವತಿಯಿಂದ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು.

ಕುಲಸಚಿವ ಡಾ. ಬಿ. ಶರಣಪ್ಪ, ಮೌಲ್ಯ ಮಾಪನ ಕುಲಸಚಿವ ಡಾ. ಜ್ಯೋತಿ ಧಮ್ಮ ಪ್ರಕಾಶ್, ವಿತ್ತಾಧಿಕಾರಿ ಪ್ರೊ. ರಾಜನಾಳ್ಕರ್ ಲಕ್ಷ್ಮಣ, ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ ಮಾಲೆ ಉಪಸ್ಥಿತರಿದ್ದರು. ವಿವಿಯ ಎಲ್ಲಾ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಲಕ್ಷ್ಮೀಶಂಕರ್ ಜೋಶಿ ಹಾಗೂ ಸಂಗೀತ ವಿಭಾಗದ ವಿದ್ಯಾರ್ಥಿಗಳು ಮೀರಾ ಭಜನೆ ಹಾಡುವ ಮೂಲಕ ಪ್ರಾರ್ಥಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಕೆ. ಲಿಂಗಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಎನ್ ಎಸ್ ಎಸ್ ಘಟಕದ ಸಂಯೋಜಕ ಡಾ. ಎನ್. ಜಿ ಕಣ್ಣೂರ್ ವಂದಿಸಿದರು.