ದೇಶದ ಅಭಿವೃದ್ದಿಗೆ ಭ್ರಷ್ಟಾಚಾರ ಮಾರಕ : ಡಾ.ಐ.ಜೆ.ಮ್ಯಾಗೇರಿ

ವಿಜಯಪುರ ನ.7: ಅಭಿವೃದ್ದಿ ಹೊಂದಿದ ರಾಷ್ಟ್ರಕ್ಕೆ ಭ್ರಷ್ಟಾಚಾರವೆಂಬುದು ಅಭಿವೃದಿಗೆ ಮಾರಕವಾದ ಒಂದು ಪ್ರಬಲವಾದ ಅಂಶವಾಗಿದೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ. ಐ.ಜೆ.ಮ್ಯಾಗೇರಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯಪುರದ ಕಾರಾಗೃಹ ಮತ್ತು ಸುಧಾರಣಾ ಸೇವಾ ಕೇಂದ್ರದ ವತಿಯಿಂದ ಹಮ್ಮಿಕೊಂಡ “ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ” ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಎಲ್ಲ ಆಯಾಮಗಳಿಂದಲೂ ರಾಷ್ಟ್ರ ಅಭಿವೃದ್ದಿ ಹೊಂದಬೇಕಾದರೆ ಭ್ರಷ್ಟಾಚಾರ ಮುಕ್ತವಾಗಬೇಕು, ಈ ನಿಟ್ಟಿನಲ್ಲಿ ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಸರ್ಕಾರಿ ನೌಕರರಾದ ನಾವು ಪ್ರಾಮಾಣಿಕತೆಯಿಂದಿರಬೇಕು ಡಾ. ಬಿ.ಆರ್.ಅಂಬೇಡ್ಕರ್ ಅÀವರ ಮಾತಿನಂತೆ “ಎಲ್ಲ ಮೌಲ್ಯಗಳಲ್ಲಿ ಶ್ರೇಷ್ಠವಾದದ್ದು ಪ್ರಾಮಾಣಿಕತೆ ಎಂಬ ಮಾತನ್ನು ನೆನಪಿಸಿಕೊಳ್ಳುತ್ತಾ, ಪ್ರಾಮಾಣಿಕತೆ ಎಂಬುದು ಮತ್ತೊಬ್ಬರಿಂದ ಕಲಿಯುವುದಲ್ಲ ಅದನ್ನು ನಾವು ರೂಢಿಸಿಕೊಳ್ಳಬೇಕು. ಕುಟುಂಬದೊಂದಿಗೆ ಇರುವ ಬದ್ಧತೆ ಕರ್ತವ್ಯದಲ್ಲೂ ಕಾಣಬೇಕು.ನಮ್ಮ ಕರ್ತವ್ಯದಲ್ಲಿ ದಕ್ಷತೆ, ಪ್ರಾಮಾಣಿಕತೆ, ಸಮಯಪ್ರಜ್ಞೆ, ಪಾರದರ್ಶಕತೆ, ಸಾರ್ವಜನಿಕ ಹಿತಾಸಕ್ತಿಗಳನ್ನು ಪ್ರದರ್ಶಿಸೋಣ ಆತ್ಮ ಸಾಕ್ಷಿಗಿಂತ ಡೊಡ್ಡದು ಬೇರೊಂದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಮಂಜುನಾಥ ಹೆಚ್.ಜಿ ಅವರು ಮಾತನಾಡಿದರು. ಸಹಾಯಕ ಆಡಳಿತಾಧಿಕಾರಿ ರವಿ ಲಮಾಣಿ, ಕಛೇರಿ ಅಧೀಕ್ಷಕ ಧಾವಜಿ ರಾಠೋಡ ಮತ್ತು ಜೈಲರುಗಳಾದ ಶ್ರೀಮತಿ ತಿಲೋತ್ತಮೆ ಜೈಲರ್, ಎ.ಕೆ.ಅನ್ಸಾರಿ ಉಪಸ್ಥಿತರಿದ್ದರು. ಸಂಸ್ಥೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು. ಶಿಕ್ಷಕ ಡಿ.ಎಸ್.ದೀಕ್ಷಿತ್ ಅವರು ಸ್ವಾಗತಿಸಿ, ವಂದಿಸಿದರು.