ದೇಶದ್ರೋಹಿ-ದೇಶಪ್ರೇಮಿನಾ ಜನ ತೀರ್ಮಾನಿಸಲಿ

(ಸಂಜೆವಾಣಿ ಪ್ರತಿನಿಧಿಯಿಂದ)
ಮೈಸೂರು,ಡಿ.೨೪:ಲೋಕಸಭೆಯಲ್ಲಿ ಹೊಗೆ ಬಾಂಬ್ ಪ್ರಕರಣ ನಡೆದು ೧೦ ದಿನಗಳ ಬಳಿಕ ಮೌನ ಮುರಿದಿರುವ ಸಂಸದ ಪ್ರತಾಪ್‌ಸಿಂಹ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ದೇಶಪ್ರೇಮಿನಾ ಅಥವಾ ದೇಶದ್ರೋಹಿನಾ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ದೆಹಲಿಯಿಂದ ಮೈಸೂರಿಗೆ ಆಗಮಿಸಿದ ಪ್ರತಾಪ್‌ಸಿಂಹ ಅವರು ಸಂಸತ್ ಭವನದ ಮೇಲೆ ದಾಳಿ ನಡೆದ ಬಳಿಕ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು.
ಸುದ್ದಿಗಾರರು ಸಂಸತ್ತಿನಲ್ಲಿ ನಡೆದ ಘಟನೆ ಹಾಗೂ ಮೈಸೂರು ಮೂಲದ ಮನೋರಂಜನ್‌ಗೆ ಪಾಸ್ ನೀಡಿದ ಕುರಿತು ಪ್ರಶ್ನೆಗಳ ಸುರಿಮಳೆಯಾಗಿದೆ. ಆಗ ತಾವು ದೇಶಪ್ರೇಮಿನಾ ಅಥವಾ ದೇಶದ್ರೋಹಿನಾ ಎಂಬುದನ್ನು ಚಾಮುಂಡಿಬೆಟ್ಟದ ತಾಯಿ, ಕೊಡಗಿನ ಕಾವೇರಿ, ನನ್ನ ಓದುಗರು ಹಾಗೂ ಮೈಸೂರು-ಕೊಡಗು ಮತದಾರರು ತೀರ್ಮಾನ ಮಾಡುತ್ತಾರೆ ಎಂದರು.
ಪದೇ ಪದೇ ಸಂಸತ್ ಭವನದ ದಾಳಿ ಕುರಿತು ಸುದ್ದಿಗಾರರು ಪ್ರಶ್ನೆ ಕೇಳಿದ್ದರಿಂದ ವಿಚಲಿತರಾದ ಪ್ರತಾಪ್‌ಸಿಂಹ ಆ ಪ್ರಶ್ನೆ ಬಿಟ್ಟು ಏನನ್ನಾದರೂ ಇದ್ದರೆ ಕೇಳಿ ಉತ್ತರಿಸುತ್ತೇನೆ. ಈ ವಿಚಾರದಲ್ಲಿ ಇಷ್ಟು ಮಾತ್ರ ಹೇಳುತ್ತೇನೆ. ಈ ಬಗ್ಗೆ ಏನನ್ನೂ ಕೇಳಬೇಡಿ ಎಂದಷ್ಟೇ ಉತ್ತರಿಸಿದರು.
ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮುಂದಿನ ಕಲಾಪಗಳು ನಡೆಯುತ್ತಿದ್ದ ವೇಳೆ ಲೋಕಸಭೆಯ ಗ್ಯಾಲರಿಯಿಂದ ಲೋಕಸಭೆಗೆ ಜಿಗಿದು ಮೇಜಿನ ಮೇಲೆ ಓಡಾಡಿ ಏಕಾಏಕಿ ಅಪರಿಚಿತರು ಹೊಗೆ ಬಾಂಬ್ ಸಿಡಿಸಿದ್ದರು. ಈ ಘಟನೆ ಸಾಕಷ್ಟು ಕೋಲಾಹಲಕ್ಕೂ ಕಾರಣವಾಗಿತ್ತು.
ಪ್ರತಾಪ್‌ಸಿಂಹ ಹೆಸರಿನಲ್ಲಿ ಪಾಸ್ ಪಡೆದು ಕಲಾಪ ವೀಕ್ಷಣೆಗೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಸಂಸದ ಪ್ರತಾಪ್‌ಸಿಂಹ ದೇಶದ್ರೋಹಿ ಅವರನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಈ ಎಲ್ಲ ವಿದ್ಯಮಾನ ನಡೆದು ೧೦ದಿನಗಳ ಬಳಿಕ ಪ್ರತಾಪ್‌ಸಿಂಹ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ ತಾವು ದೇಶದ್ರೋಹಿಯೇ ಅಥವಾ ದೇಶಪ್ರೇಮಿಯೇ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.