ದೇಶದೆಲ್ಲೆಡೆ ಆಮ್ಲಜನಕ, ರೆಮಿಡಿಸಿವಿರ್ ಕೊರತೆ


ನವದೆಹಲಿ,ಏ.೧೯- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಪ್ರಮಾಣದಲ್ಲಿ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಆಮ್ಲಜನಕ,ರೆಮಿಡಿಸಿವಿರ್, ಹಾಸಿಗೆ ಕೊರತೆ ಎದುರಾಗಿದೆ.
ವೈದ್ಯಕೀಯ ಆಮ್ಲಜನಕ ಸೇರಿದಂತೆ ವಿವಿಧ ಸಮಸ್ಯೆ ಎದುರಿಸುತ್ತಿರುವ ರಾಜ್ಯಗಳ ಸಾಲಿಗೆ ಇದೀಗ ದೆಹಲಿಯೂ ಕೂಡ ಹೊಸದಾಗಿ ಸೇರ್ಪಡೆಯಾಗಿದೆ.ತಕ್ಷಣ ಆಮ್ಲಜನಕ ಸೇರಿದಂತೆ ಇನ್ನಿತರೆ ಅಗತ್ಯ ಸಲಕರಣೆ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು, ಆಮ್ಲಜನಕ ಸೇರಿದಂತೆ ಇನ್ನಿತರೆ ಸಮಸ್ಯೆ ಬಗೆಹರಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ರಾಜ್ಯಗಳ ಜೊತೆ ಚರ್ಚೆ ಮಾಡುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ರಾಜ್ಯಗಳ ಬೇಡಿಕೆ ಆಧರಿಸಿ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡಲು ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಎದುರಾಗಿದೆ. ಮಾಮೂಲಿಗಿಂತ ಹೆಚ್ಚಾಗಿ ಆಮ್ಲಜನಕ ಕೊರತೆ ಎದುರಾಗಿದೆ. ಹೀಗಾಗಿ ಮಾಮೂಲಿಗಿಂತ ಹೆಚ್ಚಿನ ಆಮ್ಲಜನಕ ಪೂರೈಕೆ ಮಾಡುವಂತೆ ತಿಳಿಸಿದ್ದಾರೆ.
ಸೋಂಕು ನಿಯಂತ್ರಣ ಮಾಡುವುದು ದೆಹಲಿಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರದ ಜವಬ್ದಾರಿಯೂ ಕೂಡ.ಹೀಗಾಗಿ ಕೂಡಲೇ ಆಮ್ಲಜನಕ ಪೂರೈಕೆ ಮಾಡಿ ಎಂದಿದ್ದಾರೆ.
ಹಲವು ರಾಜ್ಯಗಳಲ್ಲಿ ಕೊರತೆ:
ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ,ಉತ್ತರ ಪ್ರದೇಶ,ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಆಮ್ಲಜನಕ ಸಮಸ್ಯೆ ಎದುರಾಗಿದೆ.
ಹೀಗಾಗಿ ಅನೇಕ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೂಡಲೇ ಆಮ್ಲಜನಕ ಪೂರೈಕೆ ಮಾಡುವಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ.