ದೇಶದಲ್ಲಿ 33 ಸಾವಿರ ಟನ್ ಕೋವಿಡ್ ತ್ಯಾಜ್ಯ ಉತ್ಪತ್ತಿ

ನವದೆಹಲಿ,ಜ.೧೦- ದೇಶದಲ್ಲಿ ಮನುಕುಲಕ್ಕೆ ಮಾರಕವಾಗಿರುವ ಕೊರೊನಾ ಪಿಡುಗು ಕಾಣಿಸಿಕೊಂಡ ೭ ತಿಂಗಳಲ್ಲಿ ದೇಶದಲ್ಲಿ ೩೩ ಸಾವಿರ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಎಂದರೆ ೩,೫೮೭ ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಕರ್ನಾಟಕದಲ್ಲಿ ೨,೦೨೬ ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ-ಅಂಶ ನೀಡಿದೆ.
ಅಕ್ಟೋಬರ್ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದರಿಂದ ೫,೫೦೦ ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ಮಂಡಳಿ ತಿಳಿಸಿದೆ.
ಜೂನ್‌ನಿಂದ ಡಿಸೆಂಬರ್‌ವರೆಗೆ ದೇಶದಲ್ಲಿ ಉತ್ಪತ್ತಿಯಾದ ತ್ಯಾಜ್ಯಗಳನ್ನು ಸಾರ್ವಜನಿಕ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಕೇಂದ್ರಗಳ ಮೂಲಕ ಸಾಗಾಣೆ ಮಾಡಲಾಗಿದೆ.
ಪಿಪಿಇ ಕಿಟ್‌ಗಳು, ಶೂ ಕವರ್‌ಗಳು, ಮಾಸ್ಕ್, ಗ್ಲೌಸ್‌ಗಳು, ರಕ್ತಸಿಕ್ತ ವೈದ್ಯಕೀಯ ಉಪಕರಣಗಳು, ರಕ್ತದ ಕಲೆಗಳಿಂದ ಮಲೀನಗೊಂಡ ಹಾಸಿಗೆಗಳು, ಸಿರಂಜ್‌ಗಳು, ಜೈವಿಕ ವೈದ್ಯಕೀಯ ತ್ಯಾಜ್ಯಗಳಾಗಿವೆ.
ರಾಜ್ಯಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳ ಮಾಹಿತಿ ಸಂಗ್ರಹಿಸಿ ಅದನ್ನು ವಿಂಗಡಿಸಿ ಹೇಗೆ ವಿಲೇವಾರಿ ಮಾಡಲಾಗುತ್ತದೆ ಎಂಬ ಬಗ್ಗೆ ನಿಗಾ ವಹಿಸಲು ಕೋವಿಡ್-೧೯ ಬಿಡಬ್ಲ್ಯುಎಂ ಆಪ್‌ನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಭಿವೃದ್ಧಿಪಡಿಸಿದೆ.
ಜೈವಿಕ ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಮೊಬೈಲ್ ಆಪ್ ಬಳಸುವುದನ್ನು ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿ ಆದೇಶ ನೀಡಿತ್ತು.

ರಾಜ್ಯದಲ್ಲಿ ಉತ್ಪತ್ತಿಯಾದ ತ್ಯಾಜ್ಯಗಳು
ಮಹಾರಾಷ್ಟ್ರ -೫,೩೬೭ ಟನ್,
ಕೇರಳ- ೩,೩೦೦ ಟನ್.
ಗುಜರಾತ್- ೩,೦೮೬ ಟನ್.
ತಮಿಳುನಾಡು- ೨,೦೮೬ ಟನ್.
ಉತ್ತರ ಪ್ರದೇಶ- ೨,೫೦೨ ಟನ್.
ದೆಹಲಿ- ೨, ೪೭೧ ಟನ್.
ಪಶ್ಚಿಮ ಬಂಗಾಳ – ೨,೦೯೭ ಟನ್.
ಕರ್ನಾಟಕ- ೨,೦೨೬ ಟನ್.