ದೇಶದಲ್ಲಿ 3.92 ಲಕ್ಷ ಮಂದಿಗೆ ಸೋಂಕು: 3,689 ಸಾವು

ನವದೆಹಲಿ,ಮೇ.೨-ದೇಶದಲ್ಲಿ ನಿನ್ನೆ ದಾಖಲೆಯ ೪ ಲಕ್ಷಕ್ಕೂ ಅಧಿಕ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೆ ಇಂದು ನಿನ್ನೆಗಿಂತ ತುಸು ಕಡಿಮೆ ಸೋಂಕು ದೃಢಪಟ್ಟಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೩,೯೨,೪೮೮ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು ಇದರೊಂದಿಗೆ ಒಟ್ಟಾರೆ ಸೋಂಕಿನ ಸಂಖ್ಯೆ ೧,೯೫,೫೭,೪೫೭ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇಂದು ಬೆಳಗ್ಗೆ ೮ ಗಂಟೆಯ ತನಕ ೩,೬೮೯ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ದೇಶದಲ್ಲಿ ಈ ಸಂಖ್ಯೆ ೨,೧೫,೫೪೨ಕ್ಕೆ ಏರಿಕೆಯಾಗಿದೆ. ಆಶಾದಾಯಕ ಬೆಳವಣಿಗೆ ಎಂದರೆ ಕಳೆದ ೨೪ ಗಂಟೆಗಳಲ್ಲಿ ೩,೦೭,೮೬೭ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದು ಇದುವರೆಗೆ ಬಿಡುಗಡೆಯಾದವರ ಸಂಖ್ಯೆ ೧,೫೯,೯೨,೨೭೧ಕ್ಕೆ ಏರಿಕೆಯಾಗಿದೆ.
ಈ ನಡುವೆ ಮಹಾರಾಷ್ಟ್ರ, ಕರ್ನಾಟಕ, ಕೇರಳ,ತಮಿಳುನಾಡು, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಛತ್ತೀಸ್ ಗಡ, ಚಂಧಗಡ, ದೆಹಲಿ ಹರಿಯಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ನಿತ್ಯ ಏರಿಕೆಯಾಗುತ್ತಿದೆ.
ದೇಶದಲ್ಲಿ ನಿತ್ಯ ದಾಖಲೆಯ ಮಟ್ಟದಲ್ಲಿ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನ, ರೆಮಿಡಿಸಿವಿರ್ ಸೇರಿದಂತೆ ಇನ್ನಿತರೆ ಮೂಲಸೌಕರ್ಯಗಳ ಕೊರತೆ ಎದುರಾಗಿದ್ದು ಸೋಂಕಿತರು ನರಳಾಡುವ ಸ್ಥಿತಿ ನಿರ್ಮಾಣವಾಗಿದೆ
ಕುಸಿದ ಚೇತರಿಕೆ:
ದೇಶದಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಚೇತರಿಕೆ ಪ್ರಮಾಣ ಶೇ.೯೭.೦೬ ರಿಂದ ಶೇ.೮೧,೮೪ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಚುನಾವಣೆ ನಡೆದ ಪಶ್ಚಿಮ ಬಂಗಾಳ,ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೆರಿಯಲ್ಲಿ ಸೋಂಕು ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

೮೪,೫೯೯ ಮಂದಿಗೆ ಲಸಿಕೆ
ದೇಶದಲ್ಲಿ ೧೮ ವರ್ಷ ದಾಟಿದ ಮಂದಿಗೆ ನಿನ್ನೆಯಿಂದ ಲಸಿಕೆ ಹಾಕುವ ಅಭಿಯಾನ ಆರಂಭವಾಗಿದ್ದು ಮೊದಲ ದಿನವೇ ೮೪,೫೯೯ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
೧೮ ರಿಂದ ೪೪ ವರ್ಷದ ವಯೋಮಾನದವರಿಗೆ ಲಸಿಕೆ ಹಾಕುವ ಕಾರ್ಯವನ್ನು ಆರಂಭಿಸಲಾಗಿದೆ.ಲಸಿಕೆಯ ಅಲಭ್ಯತೆಯಿಂದ ಅನೇಕ ರಾಜ್ಯಗಳು ನಿನ್ನೆ ಲಸಿಕೆ ಅಭಿಯಾನ ಆರಂಭಿಸಿಲ್ಲ.
ಒಟ್ಟಾರೆ ದೇಶದಲ್ಲಿ ನಿನ್ನೆ ೯,೮೯,೭೦೦ ಮಂದಿಗೆ ಲಸಿಕೆ ಹಾಕಲಾಗಿದ್ದು ಇದುವರೆಗೆ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ ೧೫,೬೬ ಕೋಟಿ ದಾಟಿದೆ.

೨೯ ಕೋಟಿಗೆ ಪರೀಕ್ಷೆ
ದೇಶದಲ್ಲಿ ಕೊರೊನಾ ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೮,೦೪,೯೫೪ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ- ಐಸಿಎಂಆರ್ ತಿಳಿಸಿದೆ.
ದೇಶದಲ್ಲಿ ಇಲ್ಲಿಯವರೆಗೆ ೨೯,೦೧,೪೨,೩೩೯ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ.ದೇಶದ ಹತ್ತು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ,ಉತ್ತರ ಪ್ರದೇಶ, ಕೇರಳ, ರಾಜಸ್ತಾನ,ಗುಜರಾತ್,ಛತ್ತೀಸ್ ಗಡ, ಆಂದ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚಿನ ಮಂದಿಗೆ ಸೋಂಕು ತಗುಲಿದೆ.