ದೇಶದಲ್ಲಿ 2 ಕೋಟಿ ದಾಟಿದ ಸೋಂಕಿತರು

ನವದೆಹಲಿ,ಏ.೨೯-.ದೇಶದಲ್ಲಿ ಎರಡನೇ ಅಲೆಯ ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚುತ್ತಿರುವ ಪರಿಗೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವನ್ನು ನಿದ್ದೆಗೆಡಿಸಿದೆ. ಸೋಂಕು ಹೆಚ್ಚಳ ಮತ್ತಷ್ಟು ಆತಂಕ,ಅನಾಹುತಗಳನ್ನು ಜೊತೆಯಲ್ಲಿಯೇ ತರುತ್ತಿದೆ. ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ೩೦ ಲಕ್ಷ ದಾಟಿದ್ದು ೨ ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕು ಹೆಚ್ಚಳದಿಂದಾಗಿ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಆಮ್ಲಜನಕ, ಹಾಸಿಗೆ, ಅಗತ್ಯ ವೈದ್ಯಕೀಯ ಸೌಲಭ್ಯ ಸಿಗದೆ ನರಳಾಡಿ ಪ್ರಾಣ ಕಳೆದುಕೊಳ್ಳುವ ದುಸ್ಥಿತಿಗೆ ದೇಶದ ಜನರು ತಲುಪಿದ್ದಾರೆ.
ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಕೇಂದ್ರ ಸರ್ಕಾರ ಆಮ್ಲಜನಕ ಘಟಕ ಸ್ಥಾಪನೆ,ಲಸಿಕೆ ಉತ್ಪಾದನೆ ಮಾಡಲು ಸೂಚಿಸಿದೆ.ಇದರಿಂದಾಗಿ ದೇಶದಲ್ಲಿ ಸೋಂಕು ಸಾವಿನ ಸಂಖ್ಯೆ ಮಿತಿ ಮೀರಿ ಹೋಗಿದೆ.ಒಂದು ರೀತಿ ಕೈ ಚೆಲ್ಲಿ ಕುಳಿತುಕೊಳ್ಳುವ ಅನಿವಾರ್ಯ ಸ್ಥಿತಿಗೆ ದೇಶದ ವೈದ್ಯಕೀಯ ವ್ಯವಸ್ಥೆ ತಲುಪಿದೆ.
ಮಹಾರಾಷ್ಟ್ರ ೬೯ ಸಾವಿರ, ಕರ್ನಾಟಕದಲ್ಲಿ ೩೯,೦೪೭,ಪಶ್ಚಿಮ ಬಂಗಾಳ ೧೭,೨೦೭,ತಮಿಳುನಾಡು ೧೬,೬೬೫,ಕೇರಳ ೩೫,೧೦೩ ರಾಜಸ್ತಾನ ೧೬,೬೧೩, ಆಂದ್ರ ಪ್ರದೇಶ ೧೪,೬೬೯, ಬಿಹಾರ ೧೩,೩೭೪, ಹರಿಯಾಣ ೧೨,೪೪೪ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಸೋಂಕು ಸಂಖ್ಯೆ ನಿತ್ಯ ದಾಖಲೆಯ ಮೇಲೆ ದಾಖಲೆ ಬರುತ್ತಿದೆ. ಇದರ ಪರಿಣಾಮ ಹಿಂದಿನ ದಾಖಲೆಯನ್ನು ಬದಿಗೊತ್ತಿ ವಿಶ್ವದದಲ್ಲಿ ಭಾರತದಲ್ಲಿ ನಿತ್ಯ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದೆ.
೩,೭೯ ಲಕ್ಷ ಮಂದಿಗೆ ಸೋಂಕು:
ದೇಶದಲ್ಲಿ ಹೊಸ ಪ್ರಕರಣ ಮತ್ತು ಸಾವಿನಲ್ಲಿ ಮತ್ತೊಮ್ಮೆ ದಾಖಲೆ ಬರೆದಿದೆ. ಬೆಳಗ್ಗೆ ೮ ಗಂಟೆಯ ತನಕ ೩,೭೯,೨೫೭ ಮಂದಿಗೆ ಸೋಂಕು ತಗುಲಿದ್ದು , ೩೬೪೫ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು ೨,೬೯,೫೦೭ ಮಂದಿ ಆಸ್ಪತ್ರೆಯಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೊಸದಾಗಿ ದಾಖಲಾಗಿರುವ ಸೋಂಕು ಸಂಖ್ಯೆ ಸೇರಿದಂತೆ ದೇಶದಲ್ಲಿ ಇದುವರೆಗೆ ೧,೮೩,೭೬,೫೨೪ ಮಂದಿಗೆ ಸೋಂಕು ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೧,೫೦,೮೬,೮೭೮ ಮಂದಿ ಗುಣಮುಖರಾಗಿದ್ದಾರೆ, ಇಲ್ಲಿಯವರೆಗೆ ಸೋಂಕಿಗೆ ೨,೦೪,೮೩೨ ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಒಟ್ಟಾರೆ ದಾಖಲಾಗಿರುವ ಸೋಂಕಿನಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ೧ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಈ ಎರಡೂ ರಾಜ್ಯಗಳಲ್ಲಿ ಸೋಂಕಿನ ತೀವ್ರತೆ ಎಷ್ಟಿದೆ ಎನ್ನುವುದು ಹೊಸ ಪ್ರಕರಣಗಳಿಂದ ಗೊತ್ತಾಗುತ್ತಿದೆ.

ರಾಕೆಟ್ ವೇಗ;
ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲು ಸಕ್ರಿಯ ಪ್ರಕರಣಗಳ ಸಂಖ್ಯೆ ೩೦ ಲಕ್ಷ ಗಟಿ ದಾಟಿ ಮುನ್ನೆಡೆದಿದೆ.
ಸದ್ಯ ದೇಶದಲ್ಲಿ ೩೦,೮೪,೮೧೪ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ ಮಹಾರಾಷ್ಟ್ರ, ಕರ್ನಾಟಕ, ದೆಹಲಿ ರಾಜ್ಯದಲ್ಲಿ ಅತ್ಯಧಿಕ ಸಕ್ರಿಯ ಪ್ರಕರಣಗಳುವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದ ಹಲವು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ,ದೆಹಲಿ,ದೆಹಲಿ,ಛತ್ತೀಸ್ ಘಡ, ಚಂಧಿಗಡ, ಮಧ್ಯ ಪ್ರದೇಶ, ತಮಿಳುನಾಡು, ಕೇರಳ, ಆಂದ್ರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣ ಶರವೇಗದಲ್ಲಿ ಹೆಚ್ಚುತ್ತಿದೆ.

೧೫ ಕೋಟಿಗೆ ಲಸಿಕೆ
ಒಂದು ಕಡೆ ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಅಂಕೆಗೆ ಸಿಗದ ರೀತಿ ಶರವೇಗದಲ್ಲಿ ಮುನ್ನೆಡೆಯುತ್ತಿದ್ದು ಮತ್ತೊಂದು ಕಡೆ ಲಸಿಕೆ ಹಾಕುವ ಕಾರ್ಯವೂ ಪ್ರಗತಿಯಲ್ಲಿದೆ
ನಿನ್ನೆ ಸಂಜೆ ತನಕ ದೇಶದಲ್ಲಿ ೧೫ ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಒಟ್ಟಾರೆ ೧೫,೦೦,೨೦,೬೪೮ ಮಂದಿಗೆ ಲಸಿಕೆ ಹಾಕಲಾಗಿದೆ.ಮೇ.೧ ರಿಂದ ಯುವ ಜನರಿಗೆ ಲಸಿಕೆ ಹಾಕುವ ಕಾರ್ಯ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ.