ದೇಶದಲ್ಲಿ ೯೮ ಲಕ್ಷಕ್ಕೂ ಅಧಿಕ ಸೋಂಕಿತರು ಗುಣಮುಖ


ನವದೆಹಲಿ, ಡಿ. ೩೦- ದೇಶಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗದ ಉಪಟಳ ಮುಂದುವರೆದಿದ್ದು ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೦ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಹೊಸದಾಗಿ ಆಗಿದ್ದು ಜನರ ನೆಮ್ಮದಿಗೆ ಭಂಗ ಉಂಟು ಮಾಡಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಿಗ್ಗೆ ನೀಡಿರುವ ಮಾಹಿತಿ ಪ್ರಕಾರ ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೨೦ ಸಾವಿರದ ೫೫೦ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಇದುವರೆಗೂ ದಾಖಲಾಗಿರುವ ಒಟ್ಟಾರೆ ಸೋಂಕಿತರ ಸಂಖ್ಯೆ ಒಂದು ಕೋಟಿ ಎರಡು ಲಕ್ಷದ ೪೪ ಸಾವಿರ ೮೫೩ ತಲುಪಿದೆ.
ಇದೇ ಅವಧಿಯಲ್ಲಿ ೨೮೬ ದುರ್ದೈವಿಗಳು ಸಾವನ್ನಪ್ಪಿದ್ದು ಇದುವರಿಗೂ ಮೃತಪಟ್ಟವರ ಸಂಖ್ಯೆ ೧ ಲಕ್ಷ ೪೮ ಸಾವಿರದ ೪೩೯ ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಇನ್ನೊಂದೆಡೆ ನಿನ್ನೆ ೨೬ ಸಾವಿರದ ೫೭೨ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಇದರೊಂದಿಗೆ ದೇಶದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ ದಿನೇ ದಿನೇ ಹೆಚ್ಚಾಗಿದ್ದು ಇಲ್ಲಿಯ ತನಕ ಗುಣಮುಖರಾದವರ ಸಂಖ್ಯೆ ೯೮ ಲಕ್ಷಕ್ಕೂ ಹೆಚ್ಚಾಗಿದೆ ಎಂಬ ವಿಚಾರ ಸಮಾಧಾನ ತರುವಂತಹ ಆಗಿದೆ.
ನಿನ್ನೆ ಕೇವಲ ೧೬ ಸಾವಿರದ ೪೩೨ ಸೋಂಕು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಕಳೆದ ಆರು ತಿಂಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ದಾಖಲಾಗಿದ್ದವು. ಇದರೊಂದಿಗೆ ೨೦ ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ದಾಖಲಾಗಿರುವುದು ಈ ತಿಂಗಳಲ್ಲಿ ಇದು ಮೂರನೇ ಬಾರಿಯಾಗಿದೆ.
ದೇಶದಲ್ಲಿ ಇದುವರೆಗೂ ೯೮ ಲಕ್ಷದ ೩೪ ಸಾವಿರದ ೧೪೧ ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಚೇತನಕ್ಕೆ ಪ್ರಮಾಣ ಶೇಕಡ ೯೫.೯೨ ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಸಾವಿನ ಪ್ರಮಾಣ ಇಳಿಕೆಯಾಗಿದ್ದು, ಇದು ಸಹ ಶೇಕಡ ೧.೪೫ ಕ್ಕೆ ತಲುಪಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸತತವಾಗಿ ಎಂಟನೇ ದಿನವೂ ಮೂರು ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. ಪ್ರಸ್ತುತ ೨ ಲಕ್ಷದ ೬೨ ಸಾವಿರದ ೨೭೨ ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಈ ಪ್ರಮಾಣ ಶೇಕಡ ೨.೬೩ ರಷ್ಟಾಗಿದೆ.
ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿನ್ನೆ ೧೧ ಲಕ್ಷಕ್ಕೂ ಅಧಿಕ ಮಾದರಿ ಪರೀಕ್ಷೆಗಳನ್ನು ನಡೆಸಿದ್ದು ದೇಶದಲ್ಲಿ ಇದುವರೆಗೂ ನಡೆಸಿರುವ ಮಾದರಿ ಪರೀಕ್ಷೆಗಳ ಸಂಖ್ಯೆ ೧೭ ಕೋಟಿ ದಾಟಿದೆ.