ದೇಶದಲ್ಲಿ ೯೧ ಲಕ್ಷದ ಸನಿಹಕ್ಕೆ ಸೋಂಕಿತರು

ನವದೆಹಲಿ ನವೆಂಬರ್ ೨೨ . ದೇಶಾದ್ಯಂತ ಕೊರೋನಾ ಉಪಟಳ ಮುಂದುವರೆದಿದ್ದು, ಪ್ರಸ್ತುತ ದೇಶದಲ್ಲಿ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ೯೧ ಲಕ್ಷದ ಸಮೀಪಿಸುತ್ತಿದೆ. ಇದರ ಜೊತೆಗೆ ಸಾಂಕ್ರಾಮಿಕ ರೋಗದ ಎರಡನೇ ಅಲೆ ದೇಶದ ಹಲವು ರಾಜ್ಯಗಳಲ್ಲಿ ಕಂಡುಬಂದಿದ್ದು ಜನರಲ್ಲಿನ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಕಳೆದ ೨೪ ಗಂಟೆಗಳಲ್ಲಿ ೪೫ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆ ಯಾಗಿದ್ದು ಒಟ್ಟಾರೆ, ಇರುವರೆಗೆ ದೇಶದಲ್ಲಿ ದಾಖಲಾಗಿರುವ ಸೋಂಕಿತರ ಸಂಖ್ಯೆ, ೯೧ ಲಕ್ಷದ ಗಡಿ ಸನಿಹಕ್ಕೆ ತಲುಪಿದ್ದು, ಮಹಾಮಾರಿಯ ಬಿಕ್ಕಟ್ಟಿನಿಂದ ಮುಕ್ತಿ ಕಾಣುವ ದಿನಗಳು ಎಂದೋ ಎಂಬ ಚಿಂತೆ ಜನರನ್ನು ಕಾಡಲಾರಂಭಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ ೨೪ ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ೪೫ ಸಾವಿರದ ೨೦೯ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ದೇಶದಲ್ಲಿ ದಾಖಲಾಗಿರುವ ಸೋಂಕಿತರ ಸಂಖ್ಯೆ ೯೦ ಲಕ್ಷದ ೯೫ ಸಾವಿರದ ೮೦೬ ತಲುಪಿದೆ.
ಕಳೆದ ಒಂದು ದಿನದ ಅವಧಿಯಲ್ಲಿ ೫೦೧ ಸೋಂಕಿತರು ಗುಣಮುಖರಾಗ ದೇ ಸಾವನ್ನಪ್ಪಿದ್ದು ಇರುವರೆಗೂ ಮೃತಪಟ್ಟವರ ಸಂಖ್ಯೆ ಒಂದು ಲಕ್ಷದ ೩೩ ಸಾವಿರದ ೨೨೭ ಕ್ಕೆ ಏರಿಕೆಯಾಗಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ ಇಂದು ಹೊಸದಾಗಿ ದಾಖಲಾಗಿರುವ ಸೋಂಕಿತರ ಸಂಖ್ಯೆ ತುಸು ಕಡಿಮೆಯಾಗಿದೆ.
ನಿನ್ನೆ ಬೆಳಗ್ಗೆ ವರೆಗೆ ದೇಶದಲ್ಲಿ ೪೬ ಸಾವಿರದ ೨೩೨ ಸೋಂಕು ಪ್ರಕರಣಗಳು ಪತ್ತೆಯಾಗಿ, ಇದೇ ಅವಧಿಯಲ್ಲಿ ೫೬೪ ಸೋಂಕಿತರು ಚೇತರಿಕೆ ಕಾಣದೆ ಸಾವನ್ನಪ್ಪಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಏರುಮುಖದಲ್ಲಿ ಸಾಗುತ್ತಿರುವುದು ಅಲ್ಲಿನ ಜನರನ್ನು ಚಿಂತೆಗೀಡುಮಾಡಿದೆ. ಇದರ ಪರಿಣಾಮವಾಗಿ ರಾಜ್ಯ ಸರ್ಕಾರಗಳು ಹಲವಾರು ನಿರ್ಬಂಧಗಳನ್ನು ಜಾರಿಮಾಡುವ ಜೊತೆಗೆ, ಮಾರ್ಗಸೂಚಿ ನಿಯಮ ಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು ಮತ್ತು ಶಾಲೆಗಳನ್ನು ತೆರೆಯುವ ನಿರ್ಧಾರವನ್ನು ಮುಂದೂಡುವಂತೆ ಆಗಿದೆ.

ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳು ಹಲವಾರು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿವೆ. ಈ ನಡುವೆ ದೆಹಲಿಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ಹೆಚ್ಚಿನ ದಂಡ ವಿಧಿಸಲು ತೀರ್ಮಾನಿಸಿದೆ.

ಸಕ್ರಿಯ ಪ್ರಕರಣ

ದೇಶದಲ್ಲಿ ಪ್ರಸ್ತುತ ೪ ಲಕ್ಷದ ೪೦ ಸಾವಿರದ ೯೬೨ ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ನಿಗದಿತ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ತಿಳಿಸಿದೆ. ಇನ್ನೊಂದೆಡೆ ಗುಣ ಮುಖರ ಸಂಖ್ಯೆ ಹೆಚ್ಚಾಗುತ್ತಿದ್ದು, ಈತನಕ ೮೫ ಲಕ್ಷದ ೨೧ ಸಾವಿರದ ೬೧೭ ರೋಗಿಗಳು ಚೇತರಿಕೆ ಯಾಗಿ ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದ್ದಾರೆ.

ಪ್ರಸ್ತುತ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇಕಡಾ ೯೩. ೬೮ ರಷ್ಟಿದೆ. ದೇಶಾದ್ಯಂತ ಸೋಂಕು ಪರೀಕ್ಷೆ ಪ್ರಮಾಣ ಹೆಚ್ಚಾಗಿರುವುದರಿಂದ ಪ್ರತಿನಿತ್ಯದ ಪಾಸಿಟಿವಿಟಿ ದರ ಶೇಕಡ ೪. ೩೪ ರಷ್ಟಿದೆ. ಯುರೋಪ್ ಹಾಗೂ ಅಮೆರಿಕದಂತಹ ರಾಷ್ಟ್ರಗಳಲ್ಲಿ ದಿನನಿತ್ಯದ ಸೋಂಕು ಪ್ರಕರಣಗಳ ದಾಖಲೆಯಲ್ಲಿ ಏರಿಕೆ ಕಂಡುಬಂದಿದ್ದು ಭಾರತದಲ್ಲಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಉತ್ತರ ಭಾರತದ ರಾಜ್ಯಗಳಲ್ಲಿ ಕೋವಿಡ್ ೧೯ರ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕೆಂದು ನಿನ್ನೆ ಸೂಚನೆ ನೀಡಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಇರುವರೆಗೂ ೧೩ ಕೋಟಿಗೂ ಅಧಿಕ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇಡೀ ವಿಶ್ವದಲ್ಲಿ ಮತ್ತೊಂದು ದಾಖಲೆಯನ್ನು ಮಾಡಲಾಗಿದೆ.