ದೇಶದಲ್ಲಿ ಸೋಂಕು ಮತ್ತೆ ಏರಿಕೆ


ನವದೆಹಲಿ ನವೆಂಬರ್ ೫ ದೇಶಾದ್ಯಂತ ಕೋರೋ ನಾ ಮಹಾಮಾರಿಯ ರುದ್ರ ನರ್ತನ ಮತ್ತೆ ಹೆಚ್ಚಾಗುವ ಸೂಚನೆಗಳು ಕಂಡು ಬರುತ್ತಿವೆ. ಕಳೆದ ಒಂದು ವಾರದಿಂದ ಇಳಿಮುಖದ ಹಾದಿಯಲ್ಲಿದ್ದ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಾಗಿರುವುದು ಆತಂಕಕ್ಕೆ ಎಡೆಮಾಡಿದೆ .
ಇದಕ್ಕೆ ಕಾರಣ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೫೦ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಇದುವರೆಗೂ ದಾಖಲಾದ ಸೋಂಕಿತರ ಸಂಖ್ಯೆ ೮೩ ಲಕ್ಷ ದಾಟಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಿಗ್ಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೫೦ ಸಾವಿರದ ೨೦೯ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ ೮೩ ಲಕ್ಷದ ೬೪ ಸಾವಿರದ ೮೬ ಕ್ಕೆ ಏರಿಕೆಯಾಗಿರುವುದು ಮತ್ತೆ ಜನರನ್ನು ಆತಂಕಕ್ಕೀಡು ಮಾಡಿದೆ.
ಇನ್ನೊಂದೆಡೆ ಸಾವಿನ ಸಂಖ್ಯೆ ಹೆಚ್ಚಾಗಿದ್ದು ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಹಾಮಾರಿ ಸೋಂಕಿನಿಂದ ಗುಣಮುಖರಾಗದೆ ೭೦೪ ಮಂದಿ ಸಾವನ್ನಪ್ಪಿದ್ದಾರೆ ಇದರೊಂದಿಗೆ ಇದುವರೆಗೂ ಪಟ್ಟವರ ಸಂಖ್ಯೆ ೧ ಲಕ್ಷ ೨೪ ಸಾವಿರದ ೩೧೫ ಕ್ಕೆ ಏರಿಕೆಯಾಗಿದೆ.
ಸಮಾಧಾನಕರ ವಿಷಯವೆಂದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರವಾಗಿ ಇಳಿಮುಖ ಕಂಡುಬರುತ್ತಿದ್ದು ಕಳೆದ ೨೪ ಗಂಟೆಗಳ ಅವಧಿಯಲ್ಲಿ ೫ ಸಾವಿರ ೮೨೫ ಸೋಂಕಿತರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಇದರೊಂದಿಗೆ ಪ್ರಸ್ತುತ ೫ ಲಕ್ಷದ ೨೭ ಸಾವಿರದ ೯೬೨ ಸಕ್ಕ ಪ್ರಕರಣಗಳು ದಾಖಲಾಗಿದ್ದು ಸಂಬಂಧಿತ ರೋಗಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಒಂದು ದಿನದ ಅವಧಿಯಲ್ಲಿ ೫೫ ಸಾವಿರದ ೩೩೧ ಸೋಂಕಿತರು ಗುಣಮುಖರಾಗಿ ಮನೆಗಳಿಗೆ ತೆರಳಿರುವುದು ಆಶಾದಾಯಕ ವಿಚಾರವಾಗಿದೆ. ಇಂದಿಗೆ ಇದುವರೆಗೂ ೭೭ ಲಕ್ಷದ ೧೧ ಸಾವಿರದ ೮೦೯ ಸೋಂಕಿತರು ಗುಣಮುಖರಾಗಿ ರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮೂಲಗಳ ಪ್ರಕಾರ ಇರುವರೆಗೂ ಸುಮಾರು೧೧ ಕೋಟಿ ೫೦ ಸಾವಿರದಷ್ಟು ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೨ ಲಕ್ಷಕ್ಕೂ ಅಧಿಕ ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಆಂಧ್ರಪ್ರದೇಶ ರಾಜ್ಯಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚಾಗುತ್ತಿದೆ.ತಮಿಳುನಾಡು ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಈ ನಡುವೆ ಜಗತ್ತಿನಾದ್ಯಂತ ಸುಮಾರು ೪೮ ದಶಲಕ್ಷ ಸೋಂಕಿತರು ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮೂಲಗಳು ತಿಳಿಸಿದೆ.