ದೇಶದಲ್ಲಿ ಸೋಂಕು ಗಣನೀಯ ಇಳಿಕೆ

ನವದೆಹಲಿ, ಡಿ. ೨೭- ದೇಶದಲ್ಲಿ ಕೊರೊನಾ ಅಬ್ಬರ ಇಳಿಮುಖವಾಗುತ್ತಿರುವ ಸೂಚನೆಗಳು ಕಂಡುಬರುತ್ತಿದ್ದು ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೇವಲ ೧೮ ಸಾವಿರದ ೭೩೨ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿರುವುದು ಇದನ್ನು ಪುಷ್ಠೀಕರಿಸಿದೆ.
ಕಳೆದ ಸುಮಾರು ಆರು ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಜುಲೈ ಒಂದರಂದು ೧೮ ಸಾವಿರದ ೬೫೩ ಸೋಂಕು ಪ್ರಕರಣಗಳು ದಾಖಲಾಗಿದ್ದವು. ಆರು ತಿಂಗಳ ನಂತರ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಪ್ರಮಾಣದ ಸೋಂಕು ಪ್ರಕರಣಗಳು ದಾಖಲಾಗಿರುವುದು ಮಹಾಮಾರಿಯ ಉಪಟಳ ಇಳಿಕೆಯಾಗುತ್ತಿರುವುದು ಗೋಚರಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಿಗ್ಗೆ ನೀಡಿರುವ ಮಾಹಿತಿ ಪ್ರಕಾರ, ದೇಶಾದ್ಯಂತ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೮ ಸಾವಿರದ ೭೩೨ ಸೋಂಕು ಪ್ರಕರಣಗಳು ಹೊಸದಾಗಿ ದಾಖಲಾಗಿದ್ದು ಇದರೊಂದಿಗೆ ಒಟ್ಟಾರೆ ದೇಶದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಒಂದು ಕೋಟಿ ಒಂದು ಲಕ್ಷದ ೮೭ ಸಾವಿರದ ಎಂಟುನೂರ ಐವತ್ತು ತಲುಪಿದೆ.
ಇದೇ ಅವಧಿಯಲ್ಲಿ ಮಹಾಮಾರಿ ಸೋಂಕಿನಿಂದ ೨೭೯ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇದುವರೆಗೂ ಸಂಖ್ಯೆ ಒಂದು ಲಕ್ಷದ ೪೭,೬೨೨ ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ದೇಶದಲ್ಲಿ ಇನ್ನೂ ೨ ಲಕ್ಷದ ೭೮ ಸಾವಿರದ ೬೯೦ ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ದೆಹಲಿಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೇವಲ ೬೫೫ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆ ಎಂದು ಹೇಳಲಾಗಿದೆ.
ನವಂಬರ್ ತಿಂಗಳಲ್ಲಿ ರಾಷ್ಟ್ರರಾಜಧಾನಿಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏರುಮುಖದಲ್ಲಿ ಸಾಗಿದ್ದು ಇದೀಗ ಇಳಿಕೆಯಾಗುತ್ತಿರುವುದು ಸಮಾಧಾನಕರ ವಿಷಯವಾಗಿದೆ.
ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಎರಡು ಸಾವಿರದ ೮೫೪ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ೬೦ ಮಂದಿ ಸಾವನ್ನಪ್ಪಿದ್ದಾರೆ.
ಕರ್ನಾಟಕ ಸೇರಿದಂತೆ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳು ಇಡೀ ದೇಶದಲ್ಲಿ ಮಹಾಮಾರಿ ಸೋಂಕಿನಿಂದ ಅತಿಹೆಚ್ಚು ಬಾಧಿತ ರಾಜ್ಯಗಳೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿವೆ.