ದೇಶದಲ್ಲಿ ಸೋಂಕು ಕ್ಷೀಣ

ನವದೆಹಲಿ,ಡಿ.೧-ದೇಶದಲ್ಲಿ ಆತಂಕ ಮೂಡಿಸಿರುವ ಓಮಿಕ್ರಾನ್ ಭೀತಿಯ ನಡುವೆ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ.

ನಿನ್ನೆ ದಾಖಲಾಗಿದ್ದ ಸೋಂಕಿಗಿಂತ ಇಂದು ತುಸು ಕಡಿಮೆ ಸೋಂಕು ದೃಢಪಟ್ಟಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೮,೯೫೪ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೨೬೭ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಜೊತೆಗೆ ೧೦,೨೦೭ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಕುಸಿದಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯ ಒಂದು ಲಕ್ಷಕ್ಕೂ ಕಡಿಮೆ ಇದೆ. ೯೯,೦೨೩ ಮಂದಿಯಲ್ಲಿ ಸಕ್ರಿಯ ಪ್ರಕರಣ ಇದೆ. ೫೪೭ ದಿನಗಳ ಬಳಿಕ ಅತಿ ಕಡಿಮೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇದಾಗಿದೆ.

೧೨೪ ಕೋಟಿ ಡೋಸ್ ಲಸಿಕೆ:

ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕು ಸಂಖ್ಯೆ ಇಳಿಕೆಯಾಗುತ್ತಿರುವ ನಡುವೆಯೇ ಲಸಿಕೆ ನೀಡಿಕೆ ಪ್ರಮಾಣವನ್ನು ಹೆಚ್ಚು ಮಾಡಲಾಗುತ್ತದೆ. ಇದುವರೆಗೂ ೧೨೪
ಕೋಟಿ ಡೋಸ್ ಗೂ ಅಧಿಕ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕೊರೊನಾ ಸೋಂಕಿನ ದಿನ ದಿನದ ಪಾಸಿಟಿವಿಟಿ ಪ್ರಮಾಣ ಶೇ.೦. ೮೧ ರಷ್ಟು ಇದ್ದು ವಾರದ ಸರಾಸರಿ ಪ್ರಮಾಶ ಶೇ. ೦.೮೪. ರಷ್ಡು ಇದೆ ಎಂದು ತಿಳಿಸಲಾಗಿದೆ

೬೪.೨೪ ಕೋಟಿ ಜನರಿಗೆ ಕೊರೊನಾ ಪತ್ತೆ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದೆ.

ಚೇತರಿಕೆ ಏರಿಕೆ

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದೆ.

ದೇಶದಲ್ಲಿ ಪ್ರಮಾಣ ಶೇ.೯೮.೩೬ ರಷ್ಟು ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.