ದೇಶದಲ್ಲಿ ಸೋಂಕು ಏರಿಳಿತ

ನವದೆಹಲಿ,ಮೇ.೪- ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಹಾವು ಏಣಿ ಆಟ ಆಡುತ್ತಿದೆ.

ದೇಶದಲ್ಲಿ ನಿನ್ನೆ ದಾಖಲಾಗಿದ್ದ ಸೋಂಕಿನಿಂದ ಇಂದು ಶೇ.೬ ರಷ್ಟು ಸೋಂಕು ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಕಳೆದ ೨೪ ಗಂಟೆಗಳಲ್ಲಿ ೩,೯೬೨ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ೨೨ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಏರಿಳಿತವಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩೬,೨೪೪ಕ್ಕೆ ಕುಸಿದಿದೆ ಎಂದು ಸಚಿವಾಲಯ ತನ್ನ ಅಧಿಕೃತ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.

ಸೋಂಕು ಇಳಿಕೆ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿನ ಚೇತರಿಕೆ ಪ್ರಮಾಣ ಶೇ. ೯೮.೭೩ ಪ್ರತಿಶತಕ್ಕೆ ಏರಿದೆ ಮತ್ತು ಸಾವಿನ ಪ್ರಮಾಣ ೧.೧೮ ಶೇಕಡಾದಲ್ಲಿ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ.

ದೇಶದಲ್ಲಿ ಕೊರೊನಾ ಸೋಂಕಿನ ಒಟ್ಟು ಪಾಸಿಟಿವಿಟಿ ಪ್ರಮಾಣ ಶೇಕಡಾ ೦.೦೮ ರಷ್ಟಿದೆ. ಸೋಂಕಿನಿಂದ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ ೫,೩೧,೬೦೬ ಕ್ಕೆ ಏರಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

ದೇಶದಲ್ಲಿ ಕೊರೊನಾ ಸೋಂಕಿನ ನಿತ್ಯ ಹಾವು ಏಣಿ ಆಟದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಸೋಂಕು ತಡೆ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ಮತ್ತು ಲಸಿಕೆ ಹಾಕುವ ಕಾರ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೊಡಗಿವೆ.