ದೇಶದಲ್ಲಿ ಭೂದಾಖಲೆಗಳಿಗೆ 14 ಅಂಕಿಯ ವಿಶಿಷ್ಟ ನಂಬರ್ ಶೀಘ್ರ ಜಾರಿ

ನವದೆಹಲಿ,ಏ. 2- ದೇಶದಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದಂತೆ ಅತಿ ಶೀಘ್ರದಲ್ಲಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಯೂನಿಕ್ ಲ್ಯಾಂಡ್ ಪಾರ್ಸಲ್ ಐಡೆಂಟಿಫಿಕೇಷನ್ ನಂಬರ್ ವ್ಯವಸ್ಥೆಯನ್ನು ದೇಶದಲ್ಲಿ ಜಾರಿ ಮಾಡುವ ಮೂಲಕ ಪ್ರತಿ ಭೂಮಿಗೆ ಗುರುತಿನ ಸಂಖ್ಯೆ ನೀಡಲು ಉದ್ದೇಶಿಸಲಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ಈ ಯೋಜನೆ ಪ್ರ್ರಾಯೋಗಿಕ ಆಧಾರದ ಮೇಲೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಈ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ಕಳೆದ ತಿಂಗಳು ಲೋಕಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸ್ಥಾಯಿ ಸಮಿತಿ ಈ ವರದಿ ಮಂಡನೆ ಮಾಡಿತ್ತು.

ಯೂನಿಕ್ ಲ್ಯಾಂಡ್ ಪಾರ್ಸಲ್ ಐಡೆಂಟಿಫಿಕೇಷನ್ ನಂಬರ್ ವ್ಯವಸ್ಥೆ 14 ಅಂಕಿಯಿಂದ ಕೂಡಿದೆ. ಇದು ಭೂ ಸರ್ವೇಕ್ಷಣಾ ವ್ಯವಸ್ಥೆಯನ್ನು ಆಧರಿಸಿದೆ. ಈ ವ್ಯವಸ್ಥೆ ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿದೆ.

ಎಲೆಕ್ಟ್ರಾನಿಕ್ ಕಾಮರ್ಸ್ ಕೋಡ್ ಮ್ಯಾನೇಜ್‍ಮೆಂಟ್ ಅಸೋಸೆಯೇಷನ್ ಸ್ಟಾಂಡೆಂಡ್ ಮತ್ತು ಭೂಸರ್ವೇಕ್ಷಣಾ ಮಾನದಂಡಗಳನ್ನು ಒಳಗೊಂಡಿದೆ.

ಹೊಸ ವ್ಯವಸ್ಥೆಯಿಂದಾಗಿ ರಾಜ್ಯಗಳು ಸುಲಭವಾಗಿ ಆಸ್ತಿಗಳ ವಿವರವನ್ನು ನೀಡುವ ಜೊತೆಗೆ ಸದಾ ಭೂದಾಖಲೆಗಳನ್ನು ಅಪ್‍ಡೇಟ್ ಮಾಡಲು ಸಹಕಾರಿಯಾಗಲಿದೆ.

ಏಕಗವಾಕ್ಷಿ ಯೋಜನೆಯಡಿ ಭೂದಾಖಲೆಗಳ ಸೇವೆಯನ್ನು ಜನರಿಗೆ ಶೀಘ್ರಗತಿಯಲ್ಲಿ ಒದಗಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಜೊತೆಗೆ ಭೂದಾಖಲೆಗಳ ಮಾಹಿತಿಯನ್ನು ಇಲಾಖೆಗಳ ಮಟ್ಟದಲ್ಲಿ ಹಣಕಾಸು ಸಂಸ್ಥೆಗಳು ಮತ್ತು ಇತರ ಭಾಗಿದಾರರೊಂದಿಗೆ ಸುಲಭವಾಗಿ ವರ್ಗಾಯಿಸಲು ಮತ್ತು ಹಂಚಿಕೊಳ್ಳಲು ನೆರವಾಗಲಿದೆ.