ದೇಶದಲ್ಲಿ ಬ್ರಿಟನ್ ರೂಪಾಂತರಿ ಭೀತಿ

ನವದೆಹಲಿ,ಜ.೫- ದೇಶದಲ್ಲಿ ರೂಪಾಂತರ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ದೇಶದಲ್ಲಿ ಇಂದು ಒಂದೇ ದಿನ ೨೦ ಕೊರೊನಾ ಸೋಂಕಿತರಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿದೆ.
ಒಟ್ಟು ರೂಪಾಂತರ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ೫೮ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲೂ ಇಂದು ಒಬ್ಬರಿಗೆ ರೂಪಾಂತರ ಕೊರೊನಾ ವೈರಸ್ ದೃಢಪಟ್ಟಿದ್ದು, ರಾಜ್ಯದಲ್ಲಿ ರೂಪಾಂತರ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ೧೧ಕ್ಕೆ ಏರಿಕೆಯಾಗಿದೆ. ಈ ಪೈಕಿ ಬೆಂಗಳೂರಿನವರಾಗಿದ್ದು, ೫ ಮಂದಿ ಶಿವಮೊಗ್ಗಕ್ಕೆ ಸೇರಿದವರು.
ದೇಶದಲ್ಲಿ ಇದುವರೆಗೂ ಬ್ರಿಟನ್‌ನ ರೂಪಾಂತರ ಕೊರೊನಾ ವೈರಸ್‌ನ ೫೮ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಹೇಳಿದೆ.
ಬ್ರಿಟನ್‌ನಲ್ಲಿ ರೂಪಾಂತರ ವೈರಸ್ ಪತ್ತೆಯಾದ ನಂತರ ಬ್ರಿಟನ್‌ನಿಂದ ದೇಶಕ್ಕೆ ವಾಪಸ್ಸಾದವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದುವರೆಗೂ ೫೮ ರೂಪಾಂತರ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.
ಕಳೆದ ಭಾನುವಾರದವರೆಗೆ ದೇಶದಲ್ಲಿ ೨೯ ರೂಪಾಂತರ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ನಿನ್ನೆ ೯ ಪ್ರಕರಣ, ಇಂದು ೨೦ಪ್ರಕರಣ ಪತ್ತೆಯಾಗಿ ಈಗ ಈ ರೂಪಾಂತರ ವೈರಸ್ ಪ್ರಕರಣಗಳ ಸಂಖ್ಯೆ ೫೮ಕ್ಕೆ ಏರಿಕೆಯಾಗಿದೆ.
ಈ ರೂಪಾಂತರ ವೈರಸ್ ದೃಢಪಟ್ಟಿರುವವರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಐಸೋಲೇಷನ್‌ನಲ್ಲಿಡಲಾಗಿದ್ದು, ಇವರ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಕಳೆದ ನ. ೨೫ ರಿಂದ ಡಿ. ೨೩ರ ಮಧ್ಯರಾತ್ರಿವರೆಗೆ ಬ್ರಿಟನ್‌ನಿಂದ ೩೩ ಸಾವಿರ ಪ್ರಯಾಣಿಕರು ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಬಂದಿಳಿದಿದ್ದಾರೆ. ಈ ಪ್ರಯಾಣಿಕರನ್ನೆಲ್ಲ ಪತ್ತೆ ಹಚ್ಚಿ ಅವರನ್ನು ಆರ್‌ಟಿ-ಪಿಸಿಆರ್‌ಗೆ ಒಳಪಡಿಸಲಾಗಿದ್ದು, ಈ ಪೈಕಿ ಇದುವರೆಗೂ ೫೮ ಪ್ರಯಾಣಿಕರಲ್ಲಿ ರೂಪಾಂತರ ವೈರಸ್ ಪತ್ತೆಯಾಗಿದ್ದು, ಇವರಿಂದ ಸೋಂಕು ಹರಡದಂತೆ ಎಲ್ಲ ಅಗತ್ಯ ಮುನ್ನೆಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಗರದದಲ್ಲಿ ೫೦೦ ಮಂದಿ ನಾಪತ್ತೆ
ಈ ಮಧ್ಯೆ ಬೆಂಗಳೂರಿನ ೮ ವಲಯದಲ್ಲಿ ಸುಮಾರು ೫೦೦ ಮಂದಿ ಸೋಂಕಿತರು ನಾಪತ್ತೆಯಾಗಿದ್ದಾರೆ.
ಕೊರೊನಾ ಸೋಂಕು ತಗುಲಿದ್ದಾಗ ತಪ್ಪು ವಿಳಾಸ ನೀಡಿ ಒಂದು ವಾರದಿಂದ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಒಟ್ಟು ೫೦೬ ಕೊರೊನಾ ಸೋಂಕಿತರಿದ್ದಾರೆ ಎಂದು ಹೇಳಲಾಗಿದ್ದು, ಕೋವಿಡ್ ಟೆಸ್ಟ್ ವೇಳೆ ಮೊಬೈಲ್ ನಂಬರ್ ಮತ್ತು ವಿಳಾಸ ತಪ್ಪಾಗಿ ನೀಡಿದ್ದಾರೆ. ನಂತರ ಸೋಂಕು ದೃಢಪಟ್ಟಾಗ ಸುಳ್ಳು ಮಾಹಿತಿ ನೀಡಿರುವುದು ಬಹಿರಂಗವಾಗಿದೆ. ಇದಕ್ಕೆ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ನಗರದಲ್ಲೇ ಇದ್ದಾರಾ ಅಥವಾ ಬೇರೆ ಹಳ್ಳಿಗಳಿಗೆ ಹೋಗಿದ್ದಾರಾ ಎಂಬುದು ಪತ್ತೆ ಹಚ್ಚಬೇಕಾಗಿದೆ.
ಬೆಂಗಳೂರು ಪೂರ್ವ – 190
ಮಹದೇವಪುರ – 150
ಬೊಮ್ಮನಹಳ್ಳಿ – 88
ಬೆಂಗಳೂರು ಪಶ್ಚಿಮ – 58
ಯಲಹಂಕ – 52
ಆರ್ ಆರ್ ನಗರ – 28
ಬೆಂಗಳೂರು ದಕ್ಷಿಣ – 18
ದಾಸರಹಳ್ಳಿ –7 ಮಂದಿ ನಾಪತ್ತೆಯಾಗಿದ್ದಾರೆ.

ಬ್ರಿಟನ್ ರೂಪಾಂತರ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ.

ದೇಶದಲ್ಲಿ ೫೮, ರಾಜ್ಯದಲ್ಲಿ ೧೧ ಸೋಂಕಿತರಿಗೆ ರೂಪಾಂತರ ವೈರಸ್ ದೃಢ.

ಬೆಂಗಳೂರಿನಲ್ಲಿ ಇಂದು ಮತ್ತೊಬ್ಬ ಸೋಂಕಿತರಲ್ಲಿ ರೂಪಾಂತರ ವೈರಸ್ ಪತ್ತೆ.

ಬೆಂಗಳೂರಿನಲ್ಲಿ ಏಳು ಮಂದಿ, ಶಿವಮೊಗ್ಗದಲ್ಲಿ ನಾಲ್ವರಲ್ಲಿ ರೂಪಾಂತರ ವೈರಸ್ ಪತ್ತೆ.