ನವದೆಹಲಿ,ಜೂ.20-ದೇಶದಲ್ಲಿ ಬಿಸಿಗಾಳಿಯ ಹಿನ್ನೆಲೆಯಲ್ಲಿ ಪರಾಮರ್ಶೆ ನಡೆಸಲು ಆರೋಗ್ಯ ಸಚಿವಾಲಯ ಐವರು ಸದಸ್ಯರ ತಂಡವನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯ ಅವರು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಸಿಗಾಳಿ ಬಾಧಿತ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಬಿಸಿಗಾಳಿಯ ವಾತಾವರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ಕಡೆ ಗಮನ ಹರಿಸುವ ಅವರು, ದೆಹಲಿಯಲ್ಲಿಂದು ಉನ್ನತ ಮಟ್ಟದ ಪರಾಮರ್ಶೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಮನ್ಸುಖ್ ಮಾಂಡವಿಯ, ಅವರು ಒಡಿಶಾ, ಛತ್ತೀಸ್‍ಘಡ, ಪಶ್ಚಿಮಬಂಗಾಳ, ತೆಲಂಗಾಣ, ಬಿಹಾರ ಮತ್ತು ಜಾರ್ಖಂಡ್‍ನಲ್ಲಿ ಬಿಸಿಗಾಳಿಯ ವಾತಾವರಣ ಹೆಚ್ಚಿದೆ. ಹೀಗಾಗಿ ಈ ರಾಜ್ಯಗಳಲ್ಲೂ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ.
ನಾಳೆ ವರ್ಚುವಲ್ ಸಭೆ:
ಬಿಸಿಗಾಳಿ ಹೆಚ್ಚಿರುವ ರಾಜ್ಯಗಳ ಪರಿಸ್ಥತಿ ಅವಲೋಕಿಸಲು ಆರೋಗ್ಯ ಸಚಿವಾಲಯ ರಾಜ್ಯ ವಿಪತ್ತು ನಿರ್ವಹಣಾ ಪಾಧಿಕಾರದ ಅಧಿಕಾರಿಗಳೊಂದಿಗೆ ವರ್ಚುವಲ್ ಮೂಲಕ ಸಭೆ ನಡೆಯಲಿದೆ ಎಂದು ತಿಳಿಸಲಾಗಿದೆ.
ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ವಿವಿಧ ಭಾಗಗಳಲ್ಲಿ ಬಿಸಿ ಗಾಳಿಯಿಂದ ಮೃತಪಟ್ಟವ ಬಗ್ಗೆ ಮಾಹಿತಿ ಕಲೆ ಹಾಕಿ ಮುಂದೆ ಬಿಸಿಗಾಳಿಯಿಂದ ತೊಂದರೆ ಆಗದಂತೆ ಜಾಗೃತೆ ವಹಿಸಲಿದ್ದಾರೆ.