ದೇಶದಲ್ಲಿ ಪೊಲೀಸ್ ದರ್ಬಾರ್

ನವದೆಹಲಿ,ಆ.೫- ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿರುವ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಸರ್ವಾಧಿಕಾರಿಗಳ ವಿರುದ್ಧ ತಿರುಗಿ ಬಿದ್ದರೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ನಮ್ಮ ದೇಶ ಹಾಗೂ ಪ್ರಜಾಪ್ರಭುತ್ವ ರಕ್ಷಿಸುವ ಕೆಲಸ ಮುಂದುವರೆಸಿ, ಬಿಜೆಪಿ ವಿರುದ್ಧ ನಿಲ್ಲುತ್ತೇವೆಯೇ ಹೊರತು ಯಾವುದಕ್ಕೂ ಹೆದರುವುದಿಲ್ಲ ಎಂದು ತಿರುಗೇಟು ನೀಡಿದರು.ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣ ಕುರಿತಂತೆ ನಿನ್ನೆಯಷ್ಟೇ ಯಂಗ್ ಇಂಡಿಯಾ ಕಚೇರಿಯಲ್ಲಿ ತಪಾಸಣೆ ನಡೆಸಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ೯ ತಾಸುಗಳ ವಿಚಾರಣೆಗೆ ಗುರಿಪಡಿಸಿದ ಬೆನ್ನಲ್ಲೆ ಕೇಂದ್ರ ಸರ್ಕಾರದ ಕ್ರಮಕ್ಕೆ ರಾಹುಲ್‌ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಟೀಕಾ ಪ್ರಹಾರ ನಡೆಸಿದರು.ದೇಶದಲ್ಲಿ ಇಂದು ಪ್ರತಿದಿನ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಸಂಸತ್‌ನಲ್ಲಿ ಬೆಲೆ ಏರಿಕೆ ಹಾಗೂ ಇನ್ನಿತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸದಸ್ಯರಿಗೆ ಅವಕಾಶ ನೀಡುತ್ತಿಲ್ಲ. ೭೦ ವರ್ಷದ ಪ್ರಜಾಪ್ರಭುತ್ವ ವ್ಯವಸ್ಥೆ ಕೇವಲ ೮ ವರ್ಷಗಳಲ್ಲಿ ನಾಶವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಕಪ್ಪು ಪಟ್ಟಿ ಧರಿಸಿ ಅವರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.ನಾಲ್ಕೈದು ಉದ್ಯಮಿಗಳಿಗಾಗಿ ಇಬ್ಬರು ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ. ಜಾರಿ ನಿರ್ದೇಶನಾಲಯದ ತನಿಖೆ ನಡೆಸುವ ಮೂಲಕ ಬಿಜೆಪಿ ಬೆದರಿಕೆ ತಂತ್ರ ಅನುಸರಿಸುತ್ತಿದೆ. ಕೇಸರಿ ಪಡೆ ನಮ್ಮ ವಿರುದ್ಧ ಯವುದೇ ಷಡ್ಯಂತ್ರ ಮಾಡಿದರೂ ಏನೂ ವ್ಯತ್ಯಾಸವಾಗುವುದಿಲ್ಲ.
ದೇಶದಲ್ಲಿ ಆರಂಭವಾಗಿರುವ ಸರ್ವಾಧಿಕಾರ ಧೋರಣೆ ವಿರುದ್ಧ ಧ್ವನಿ ಎತ್ತಿದವರಿಗೆ ವಿನಾಕಾರಣ ತೊಂದರೆ ನೀಡಲಾಗುತ್ತಿದೆ. ದೇಶದಲ್ಲಿನ ಪ್ರಜಾಪ್ರಭುತ್ವ ಸಾವಿಗೆ ನಾವೇ ಸಾಕ್ಷಿಯಾಗುತ್ತಿದ್ದೇವೆ ಎಂದು ನೊಂದು ನುಡಿದರು.
ಜನರು ಎದುರಿಸುತ್ತಿರುವ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ದೌರ್ಜನ್ಯ, ಹಿಂಸಾಚಾರಗಳ ಖಂಡಿಸಿ ಧ್ವನಿ ಎತ್ತಿದರೆ ಬಂಧಿಸಿ ಜೈಲಿಗೆ ಹಾಕಲಾಗುತ್ತಿದೆ ಎಂದು ರಾಹುಲ್ ನೊಂದು ನುಡಿದರು.

ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ರಾಗಾ ಬಂಧನ
ನಿರುದ್ಯೋಗ, ಬೆಲೆ ಏರಿಕೆ ಹಾಗೂ ಅಗತ್ಯ ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ವಿರೋಧಿಸಿ ಕಾಂಗ್ರೆಸ್ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ನಾಯಕ ರಾಹುಲ್‌ಗಾಂಧಿ, ಮುಖಂಡರಾದ ಶಶಿತರೂರ್ ಸೇರಿದಂತೆ ಇನ್ನಿತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಒಂದೆಡೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರೆ, ಸಂಸತ್ತಿನ ಉಭಯ ಸದನಗಳ ಸದಸ್ಯರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬೆಲೆ ಏರಿಕೆ, ನಿರುದ್ಯೋಗ, ಜಿಎಸ್‌ಟಿ ತೆರಿಗೆ ಹೆಚ್ಚಳ ವಿರೋಧಿಸಿ ಸಂಸತ್‌ನ ಉಭಯ ಸದನಗಳಲ್ಲೂ ಚರ್ಚೆಗೆ ಅವಕಾಶ ಕೋರಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಇಂದು ಬೀದಿಗಿಳಿದು, ಕೇಂದ್ರದ ವಿರುದ್ಧ ತಿರುಗಿ ಬಿದ್ದಿದೆ.ಪ್ರತಿಭಟನೆಗೆ ಅವಕಾಶ ನೀಡದೆ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಷ್ಟ್ರಪತಿ ಭವನದತ್ತ ತೆರಳಲು ಮುಂದಾದರು. ರಾಹುಲ್‌ಗಾಂಧಿ ಕಪ್ಪು ಬಣ್ಣದ ಶರ್ಟ್ ಧರಿಸಿ ಪ್ರತಿಭಟನೆಯಲ್ಲಿ ತೆರಳುತ್ತಿದ್ದ ವೇಳೆ ವಿಜಯ್‌ಚೌಕ್ ಬಳಿ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಖಾಕಿ ಪಡೆ ನಡುವೆ ವಾಗ್ವಾದ, ಜಟಾಪಟಿ ನಡೆದು ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.ಬಂಧನಕ್ಕೊಳಗಾಗುವ ಮುನ್ನ ಪ್ರತಿಕ್ರಿಯೆ ನೀಡಿದ ರಾಹುಲ್‌ಗಾಂಧಿ, ಸಂಸತ್‌ನಲ್ಲೂ ಈ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಸಂಸದರ ಜತೆಗೂಡಿ ಬೆಲೆ ಏರಿಕೆ, ಜಿಎಸ್‌ಟಿ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಯ ವಿರುದ್ಧ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರವ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂ ಮಾತನಾಡಿ, ಬೆಲೆ ಏರಿಕೆ, ಅಗ್ನಿಪತ್ ಯೋಜನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರ ಮೇಲೆ ಭಾರಿ ಹೊರೆ ಬಿದ್ದಿದೆ. ಅವರ ಅಹವಾಲುಗಳಿಗೆ ಸ್ಪಂದಿಸಲು ಜನಪ್ರತಿನಿಧಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.