ದೇಶದಲ್ಲಿ ಗುಜರಿ ನೀತಿ ಅನುಷ್ಠಾನದಿಂದ 3.7 ಕೋಟಿ ಉದ್ಯೋಗ ಸೃಷ್ಠಿ: ಗಡ್ಕರಿ

ನವದೆಹಲಿ, ಮಾ.18- ದೇಶದಲ್ಲಿ ವಾಹನಗಳ ಸ್ಕ್ರಾಪಿಂಗ್ ನೀತಿ ಅನುಷ್ಠಾನದಿಂದ 3.7 ಕೋಟಿ ಮಂದಿಗೆ ಉದ್ಯೋಗ ಅವಕಾಶ ಲಭ್ಯವಾಗಲಿದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರ್ ಹೇಳಿದ್ದಾರೆ.

ಈ ನೀತಿಯಿಂದ ಹೆಚ್ಚುವರಿಯಾಗಿ 30 ರಿಂದ 40 ಸಾವಿರ ಕೋಟಿ ರೂಪಾಯಿ ಸರಕು ಸೇವಾ ತೆರಿಗೆ-ಜಿಎಸ್‍ಟಿ ಸಂಗ್ರಹವಾಗಲಿದೆ ಎಂದು ಅವರು ಹೇಳಿದ್ದಾರೆ

ಸಂಸತ್ತಿನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈ ನೀತಿಯ ಮೂಲಕ ದೇಶದಲ್ಲಿ ಹತ್ತು ಸಾವಿರ ಕೋಟಿ ರೂಪಾಯಿ ಬಂಡವಾಳ ಆಕರ್ಷಣೆಗೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಯೋಗ್ಯವಲ್ಲದ ಮತ್ತು ಮಾಲಿನ್ಯ ಹೊರಸೂಸುವ ವಾಹನಗಳನ್ನು ಸ್ಕ್ರಾಪ್ ಮಾಡಲಾಗುವುದು. ಈ ನೀತಿ ದೇಶದ ಆಟೋ ಮೊಬೈಲ್ ಕ್ಷೇತ್ರದಲ್ಲಿ ಬಾರೀ ಬದಲಾವಣೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಹೊಸ ನೀತಿ ಜಾರಿಯಿಂದ ವಾಹನ ಇಂಧನದ ದಕ್ಷತೆ ಹೆಚ್ಚಾಗಲಿದೆ. ರಸ್ತೆ ಮತ್ತು ವಾಹನಗಳ ಸರಕ್ಷತಗೂ ಆದ್ಯತೆ ನೀಡಿದಂತಾಗಲಿದೆ. ಕೈಗಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳೂ ಕೂಡ ದೊರೆಯುಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ವಾಹನಗಳ ಸ್ಕ್ರಾಪಿಂಗ್ ನೀತಿಯಡಿ ತಮ್ಮ ಹಳೆಯ ವಾಹನಗಳನ್ನು ನೋಂದಾಯಿಸಿಕೊಳ್ಳುವ ವಾಹನಗಳ ಮಾಲೀಕರಿಗೆ ಪ್ರೋತ್ಸಾಹಧನ ನೀಡುವ ಜೊತೆಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ.

ಹೊಸ ನೀತಿ ಜಾರಿಯಿಂದ ದೇಶದಲ್ಲಿ ವಾಹನಗಳ ಉತ್ಪಾದನಾ ವೆಚ್ಚ ಕಡಿಮೆಗೆ ಸಹಕಾರಿಯಾಗಲಿದೆ. ಈ ನೀತಿಯಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ