ದೇಶದಲ್ಲಿ ಕೊರೊನಾ ಸುನಾಮಿ

ನವದೆಹಲಿ,ಏ.೨೧- ದೇಶದಲ್ಲಿ ಒಂದೇ ಸಮನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಡೀ ದೇಶ ತಬ್ಬಿಬ್ಬು ಆಗುವಂತಾಗಿದೆ. ಕೊರೊನಾ ಸುನಾಮಿಯಿಂದ ಜನಜೀವನದ ಮೇಲೆ ಆತಂಕದ ಕಾರ್ಮೋಡ ಕವಿದಿದೆ.
ಅಮೆರಿಕಾದಲ್ಲಿ ಒಂದೇ ದಿನ ೩.೭ಲಕ್ಷ ಮಂದಿಗೆ ಸೋಂಕು ತಗುಲಿದಾಗ ಇಡೀ ವಿಶ್ವನಿಬ್ಬೆರಗಾಗಿತ್ತು ಆದರೆ, ಅಂತಹದ್ದೇ ಪರಿಸ್ಥಿತಿ ಈಗ ಭಾರತದಲ್ಲಿ ನಿರ್ಮಾಣವಾಗಿದೆ. ಭಾರತದಲ್ಲಿ ಒಂದೇ ದಿನ ೨.೯೫ಲಕ್ಷ ಮಂದಿ ಸೋಂಕು ತಗುಲಿರುವುದು ಸರ್ಕಾರ ಚಿಂತೆಗೀಡುವಂತಾಗಿದೆ.
ಒಂದೇ ದಿನ ಸರಿ ಸುಮಾರು ೩ ಲಕ್ಷ ಮಂದಿಗೆ ದೇಶದಲ್ಲಿ ಕೊರೊನಾ ಸೋಂಕು ದೃಢಪಡುವ ಜೊತೆಗೆ ೨೦೨೩ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ ಇದೂ ಕೂಡ ದೇಶದ ಕೊರೊನಾ ಇತಿಹಾಸಲ್ಲಿ ದಾಖಲೆಯಾಗಿದೆ. ಇದು ಕೊರೋನಾ ಸೋಂಕಿನ ಭೀಕರತೆಗೆ ಕನ್ನಡಿ ಹಿಡಿದಿದೆ.
ಎರಡನೇ ಅಲೆಯ ವೇಗಕ್ಕೆ ದೇಶದ ಹಲವು ನಗರಗಳು ತತ್ತರಿಸಿ ಹೋಗಿವೆ. ಕೊರೊನಾ ಸೋಂಕು ಹೆಚ್ಚಿರುವ ಅರ್ಭಟಕ್ಕೆ ಹಾಸಿಗೆಗಳು ಭರ್ತಿಯಾಗಿವೆ. ಆಮ್ಲಜನಕದ ಸಮಸ್ಯೆ ಎದುರಾಗಿದ್ದು,ಸದ್ಯ ಇರುವ ಆಕ್ಸಿಜನ್ ಕೆಲವೇ ದಿನಗಳಿಗೆ ಆಗಲಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಸೋಂಕಿತರಿಗೆ ಹಾಸಿಗೆ,ಆಕ್ಸಿಜನ್ ಒದಗಿಸಲು ಸಾಧ್ಯವಾಗದೆ ಅನೇಕ ರಾಜ್ಯಗಳು ಕಣ್ಣು ಬಾಯಿ ಬಿಡುವಂತಾಗಿದೆ.
ಅದರಲ್ಲಿಯೂ ದೆಹಲಿ, ಅಹಮದಾಬಾದ್,ಮುಂಬೈ, ಲಕ್ನೋ,ಭೋಪಾಲ್, ಕೋಲ್ಕತಾ,ಅಹಮದಾಬಾದ್,ಸೂರತ್ ಸೇರಿದಂತೆ ವಿವಿಧ ನಗರಗಳ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿವೆ. ಐಸಿಯು ಹಾಸಿಗೆಗಳು ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳು ಮತ್ತು ನಗರಗಳ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆ ಬೆರಳಣಿಕೆಯಷ್ಟಿದೆ.ಸೋಂಕಿನ ಪ್ರಸರಣದ ವೇಗ ಇದೇ ರೀತಿ ಹೆಚ್ಚಾದರೆ ದೇಶದಲ್ಲಿ ರಣಭೀಕರತೆಯನ್ನು ಎದುರಿಸುವಂತಾಗಿದೆ.
ದೇಶದಲ್ಲಿ ಅತಿ ಹೆಚ್ಚಿನ ಸೋಂಕು ಪ್ರಕರಣ ದೃಢಪಟ್ಟ ರಾಜ್ಯಗಳಲ್ಲಿ ಮಹಾರಾಷ್ಟ್ರ-೩೯,೬೦,೩೫೯, ಕೇರಳ-೧೧,೯೭,೩೦೧, ಕರ್ನಾಟಕ- ೧೧,೦೯,೬೫೦, ತಮಿಳುನಾಡು-೯,೬೨,೯೩೫, ಮತ್ತು ಆಂದ್ರ ಪ್ರದೇಶ ೯,೪೨,೧೩೫ ಮಂದಿಗೆ ಸೋಂಕು ತಗಲುವ ಮೂಲಕ ಐದು ಹೆಚ್ಚು ಬಾಧಿತ ರಾಜ್ಯಗಳಾಗಿವೆ.

೨೧ ಲಕ್ಷ ಗಡಿ ಪ್ರಕರಣ

ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ನಿತ್ಯ ದಾಖಲೆ ಬರೆಯುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗಿದೆ. ಇಂದು ಬೆಳಗ್ಗೆ ೮ ಗಂಟೆ ತನಕ ೨.೯೫ ಲಕ್ಷ ಮಂದಿಗೆ ಸೋಂಕು ತಗುಲಿ, ೨೦೨೩ ಮಂದಿ ಮೃತಪಟ್ಟಿದ್ದಾರೆ ಇದರಿಂದಾಗಿ ದೇಶದಲ್ಲಿ ಸಕ್ರಿಯ ಪ್ರಕರಣ ಏರಿಕೆಯಾಗಿದೆ.
ಅದರಲ್ಲಿಯೂ ಮಹಾರಾಷ್ಟ್ರ, ಕರ್ನಾಟಕ, ಕೇರಳ,ತಮಿಳುನಾಡು, ಮಧ್ಯ ಪ್ರದೇಶ,ಚಂದಿಘಡ, ಚತ್ತೀಸ್‌ಘಡ, ದೆಹಲಿ, ಪಂಜಾಬ್, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲಗಲಿ ಸೋಂಕು ನಿತ್ಯ ಏರಿಕೆಯಾಗುತ್ತಿದೆ.
ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೨೧,೫೭,೫೩೮ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ದಾಖಲೆಯ ಸೋಂಕು:

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨,೯೫,೦೪೧ ಮಂದಿಗೆ ಸೋಂಕು ತಗುಲಿದ್ದು ೨೦೨೩ ಮಂದಿ ಮೃತಪಟ್ಟಿದ್ದಾರೆ. ೧,೬೭,೪೫೭ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಹೊಸದಾಗಿ ದಾಖಲಾಗಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವರೆಗೆ ೧,೫೬,೧೬,೧೩೦ ಮಂದಿಗೆ ಸೋಂಕು ಏರಿಕೆಯಾಗಿದೆ. ಇಲ್ಲಿಯತನಕ ೧,೩೨,೭೬,೦೩೯ ಮಂದಿ ಗುಣಮುಖರಾಗಿದ್ದಾರೆ, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೧,೮೨,೫೫೩ ಮಂದಿ ಸಾವನ್ನಪ್ಪಿದ್ದಾರೆ.

೧೩ ಕೋಟಿಗೆ ಸಲಿಕೆ

ದೇಶದಲ್ಲಿ ಇದುವರೆಗೆ ೧೩ ಕೋಟಿಗೂ ಅಧಿಕ ಮಂದಿಗೆ ಲಸಿಕೆ ಹಾಕಲಾಗಿದೆ. ದಿನ ನಿತ್ಯ ಸೋಂಕು ಹೆಚ್ಚಿದಂತೆ ಲಸಿಕೆ ಪ್ರಮಾಣವೂ ಹೆಚ್ಚುತ್ತಿದೆ.ನಿನ್ನೆ ಸಂಜೆ ತನಕ ೧೩,೦೧,೧೯,೩೧೦ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದರ ಜೊತೆಗೆ ನಿನ್ನೆ ೧೬,೩೯,೩೫೭ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯವರೆಗೆ ೨೭,೧೦,೫೩,೩೯೨ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ