ದೇಶದಲ್ಲಿ ಕೊರೊನಾ ಮಹಾಸ್ಫೋಟ

ನವದೆಹಲಿ,ಏ.೫- ಕಳೆದ ವರ್ಷ ಕಾಣಿಸಿಕೊಂಡಿದ್ದ ಮಹಾಮಾರಿ ಕೊರೊನಾಗಿಂತ ಕೋವಿಡ್‌ನ ೨ನೇ ಅಲೆ ದಿನದಿನಕ್ಕೂ ಹೆಚ್ಚಾಗಿ ಜನರನ್ನು ಕಾಡುತ್ತಿರುವುದು ಇಡೀ ದೇಶ ತತ್ತರಿಸುವಂತಾಗಿದೆ.
ದೇಶದಲ್ಲಿ ಕೊರೊನಾ ಕಾಣಿಸಿಕೊಂಡ ನಂತರ, ಇದೇ ಮೊದಲ ಬಾರಿಗೆ ೧ ಲಕ್ಷಕ್ಕಿಂತ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೧,೦೩,೫೫೮ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದು ಮೊದಲ ಅಲೆಗಿಂತ ಎರಡನೇ ಅಲೆಯ ಸೋಂಕು ಪ್ರಸರಣ ವೇಗ ಹೆಚ್ಚಾಗಿರುವುದಕ್ಕೆ ತಾಜಾ ಉದಾಹರಣೆಯಾಗಿದೆ.
ಇಂದು ಬೆಳಿಗ್ಗೆ ೮ ಗಂಟೆಯವರೆಗೆ ೧,೦೩,೫೫೮ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ೪೭೮ ಮಂದಿ ಸಾವನ್ನಪ್ಪಿದ್ದು, ೫೨,೮೪೭ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವರೆಗೆ ದೇಶದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ ೧,೨೫,೮೯,೦೬೭ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ ೧,೧೬,೮೨,೧೩೬ ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ ೧,೬೫,೧೦೧ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಒಟ್ಟಾರೆ ಸೋಂಕಿನ ಪೈಕಿ ಮಹಾರಾಷ್ಟ್ರವೊಂದರಲ್ಲಿ ನಿತ್ಯ ಅರ್ಧಕ್ಕಿಂತ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂದು ಬೆಳಿಗ್ಗೆ ತನಕ ಮಹಾರಾಷ್ಟ್ರದಲ್ಲಿ ೫೭ ಸಾವಿರಕ್ಕೂ ಅಧಿಕ ಮಂದಿಗೆ ಒಂದೇ ದಿನ ಸೋಂಕು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದ ಇತಿಹಾಸದಲ್ಲಿ ಇದೇ ಮೊದಲಾಗಿದೆ.
ಮಹಾರಾಷ್ಟದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ತಡೆಗೆ ರಾತ್ರಿ ಕರ್ಪ್ರ್ಯೂ ಜಾರಿ ಮತ್ತು ವಾರಾಂತ್ಯದ ಲಾಕ್ ಡೌನ್ ಜಾರಿ ಮಾಡಲಾಗಿದೆ. ಅದೇ ರೀತಿ ದೇಶದ ವಿವಿಧ ರಾಜ್ಯಗಳು ಕಠಿಣ ನಿಯಮ ಜಾರಿಗೆ ಮುಂದಾಗಿವೆ.

ಸಕ್ರಿಯ ಪ್ರಕರಣ ಏರಿಕೆ:

ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಅಂಕೆ ಸಿಗದಂತೆ ಹೆಚ್ಚುತ್ತಲೇ ಇದೆ.
ಅದರಲ್ಲಿಯೂ ಮಹಾರಾಷ್ಟ್ರದಲ್ಲಿ ಅರ್ಧಕ್ಕಿಂತ ಹೆಚ್ಚು ಸೋಂಕು ಮತ್ತು ಸಕ್ರಿಯ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಉಳಿದಂತೆ ಕರ್ನಾಟಕ, ಪಂಜಾಬ್, ಹರಿಯಾಣ, ದೆಹಲಿ, ಚಂಡಿಘಡ, ಛತ್ತೀಸ್‌ಗಡ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ, ದೇಶದ ೧೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಸೋಂಕು ಮತ್ತು ಸಕ್ರಿಯ ಪ್ರಕರಣ ಏರಿಕೆಯಾಗುತ್ತಿದೆ.
ಸದ್ಯ ದೇಶದಲ್ಲಿ ೭,೪೧,೮೩೦ ಮಂದಿಯಲ್ಲಿ ಸಕ್ರಿಯ ಪ್ರಕರಣ ಕಾಣಿಸಿಕೊಂಡಿದೆ. ಫೆಬ್ರವರಿ ತಿಂಗಳಲ್ಲಿ ಸೋಂಕಿನ ಸಂಖ್ಯೆ ೧.೩೫ ಲಕ್ಷದಷ್ಟು ಇತ್ತು. ಒಂದೂವರೆ ತಿಂಗಳ ಅವಧಿಯಲ್ಲಿ ೬ ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

೭.೯೧ ಕೋಟಿಗೆ ಲಸಿಕೆದೇಶದಲ್ಲಿ ಒಂದು ಕಡೆ ದಾಖಲೆಯ ಪ್ರಮಾಣದಲ್ಲಿ ಸೋಂಕು ನಿತ್ಯ ಏರಿಕೆಯಾಗುತ್ತಿದೆ. ಮತ್ತೊಂದು ಕಡೆ ಲಸಿಕೆ ನೀಡಿಕೆ ಹೆಚ್ಚಾಗುತ್ತಿದ್ದರೂ ನಿರೀಕ್ಷಿತ ವೇಗ ಪಡೆದಿಲ್ಲ.
ದೇಶದಲ್ಲಿ ಇಲ್ಲಿಯವರೆಗೆ ಮೂರು ಹಂತದ ಲಸಿಕಾ ಅಭಿಯಾನ ಪ್ರಗತಿಯಲ್ಲಿದ್ದು ೭,೯೧,೦೫,೧೬೩ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ನಿಯಮ ಪಾಲನೆಗೆ ಸೂಚನೆ

ದೇಶದಲ್ಲಿ ಕೊರೋನಾ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಕೊರೊನಾ ಸೋಂಕು ತಡೆಯ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
೬ ಅಡಿ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಶುಚಿತ್ವಕ್ಕೆ ಆದ್ಯತೆ ನೀಡುವುದು ಮತ್ತು ಲಸಿಕೆ ಪಡೆಯುವ ಮೂಲಕ ಸೋಂಕು ನಿಗ್ರಹಕ್ಕೆ ಜನರು ಮುಂದಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.