ದೇಶದಲ್ಲಿ ಒಂದೇ ದಿನ ೫೦ ಸಾವಿರ ಗಡಿ ದಾಟಿದ ಕೊರೊನಾ


ನವದೆಹಲಿ,ಮಾ.೩೧- ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ಸಂಖ್ಯೆ ನಿತ್ಯ ಏರಿಕೆಯಾಗುತ್ತಿದೆ. ಅದು ನಿತ್ಯ ೫೦ ಸಾವಿರ ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ. ದೇಶದಲ್ಲಿ ನೆನ್ನೆ ದಾಖಲಾಗಿದ್ದ ಒಟ್ಟಾರೆ ಸೋಂಕು ಸಂಖ್ಯೆಗಿಂತ ಇಂದು ಶೇಕಡಾ ೪ ರಷ್ಟು ಕಡಿಮೆಯಾಗಿದೆ. ಇದು ನಿರಾಳಭಾವ ತರಿಸಿದ್ದರೂ ೫೦ ಸಾವಿರ ಗಡಿ ದಾಟಿರುವುದು ಆತಂಕ ದೂರ ಮಾಡಿಲ್ಲ.
ಇಂದು ಬೆಳಗ್ಗೆ ೮ ಗಂಟೆಗೆ ದೇಶದಲ್ಲಿ ೫೩,೪೮೦ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು ದಾಖಲೆಯ ಸಂಖ್ಯೆಯಲ್ಲಿ ೩೫೪ ಮಂದಿ ಸಾವನ್ನಪ್ಪಿದ್ದಾರೆ. ಇಂದು ಆಸ್ಪತ್ರೆಯಿಂದ ೪೧,೨೮೦ ಮಂದಿ ಗುಣಗುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇಂದು ಬೆಳಗ್ಗೆ ೮ ಗಂಟೆ ತನಕ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವರೆಗೂ ಒಟ್ಟಾರೆ ಸೋಂಕಿನ ಸಂಖ್ಯೆ ೧,೨೧,೪೯,೩೩೫ ಏರಿಕೆಯಾಗಿದೆ. ಒಟ್ಟಾರೆ ಸೋಂಕಿನ ಪೈಕಿ ಇದುವರೆಗೂ ೧,೧೪,೩೪,೩೦೧ ಗುಣಮುಖರಾಗಿದ್ದಾರೆ. ೧,೬೨,೪೬೮ ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು ೧೧,೮೪೬ ಮಂದಿ ಹೊಸದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪಾಲ್ ತಿಳಿಸಿದ್ದಾರೆ.
ಸೋಂಕು ಹೆಚ್ಚುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅದರ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಖ್ಯೆ ಹೆಚ್ಚಾಗಿ ಸಮಸ್ಯೆಗೆ ಸಿಲುಕಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ಸಂಖ್ಯೆ ಮೊದಲ ಅಲೆ ಗಿಂತ ಹೆಚ್ಚು ವೇಗದಲ್ಲಿ ಹರಡುತ್ತಿದೆ ಇದು ಸಹಜವಾಗಿ ಆತಂಕಕ್ಕೆ ಸಿಲುಕುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ
ಸಕ್ರಿಯ ಪ್ರಕರಣ ಏರಿಕೆ:
ಮಹಾರಾಷ್ಟ್ರ, ಕರ್ನಾಟಕ ,ಗುಜರಾತ್ ,ಪಂಜಾಬ್, ಹರ್ಯಾಣ, ಕೇರಳ, ತಮಿಳುನಾಡು, ಮಧ್ಯಪ್ರದೇಶ ಸೇರಿದಂತೆ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ವೇಗವೂ ಕೂಡ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ೫,೫೨,೫೬೬ ಸಕ್ರಿಯ ಪ್ರಕರಣಗಳಿವೆ. ಫೆಬ್ರವರಿ ತಿಂಗಳ ಮಧ್ಯಭಾಗದವರೆಗೆ ೧೩೫೦೦೦ ಮಂದಿಗೆ ಸಕ್ರಿಯ ಪ್ರಕರಣ ದೇಶದಲ್ಲಿತ್ತು ಒಂದೂವರೆ ತಿಂಗಳಲ್ಲಿ ಸರಿಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮಂದಿಗೆ ಸಕ್ರಿಯ ಪ್ರಕರಣಗಳು ಕಾಣಿಸಿಕೊಂಡಿವೆ. ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ಏರಿಕೆಯಾಗುತ್ತಿರುವ ಪೈಕಿ ಮಹಾರಾಷ್ಟ್ರ ಒಂದರಲ್ಲಿ ಶೇಕಡ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಮತ್ತು ಸಕ್ರಿಯ ಪ್ರಕರಣಗಳು ಮಾಡುತ್ತಿವೆ
೬.೩೦ ಕೋಟಿಗೆ ಲಸಿಕೆ
ದೇಶದಲ್ಲಿ ಒಂದು ಕಡೆ ಸಕ್ರಿಯ ಪ್ರಕರಣಗಳ ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ನಡುವೆಯೇ ಕೊರೋನೋ ಸೋಂಕಿಗೆ ಲಸಿಕೆ ಹಾಕುವ ಕಾರ್ಯವು ಹೆಚ್ಚಾಗುತ್ತಿದೆ.ದೇಶದಲ್ಲಿ ಇದುವರೆಗೂ ೨ ಹಂತದಲ್ಲಿ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದ್ದು ನೆನ್ನೆ ಸಂಜೆಯತನಕ ೬,೩೦,೫೪,೩೫೩ ಲಸಿಕೆ ಹಾಕಲಾಗಿದೆ.
ಕೊರೋನಾ ಸೋಂಕಿನ ಎರಡನೇ ಅಲೆ ನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರ ತಡೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೋಂಕಿಗೆ ಲಸಿಕೆ ಹಾಕುವ ಕಾರ್ಯವನ್ನು ಮಾಡುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ