ದೇಶಕ್ಕೆ ಸೋದರಿ ನಿವೇದಿತಾ ಕೊಡುಗೆ ಅನನ್ಯ

ಕಲಬುರಗಿ.ಅ.28: ಸೋದರಿ ನಿವೇದಿತಾ ಅವರು ವಿದೇಶದಿಂದ ಭಾರತಕ್ಕೆ ಬಂದು, ಶಿಕ್ಷಕಿಯಾಗಿ ಶರೀರಶಾಸ್ತ್ರ, ಸಸ್ಯಶಾಸ್ತ್ರಗಳ ಬಗ್ಗೆ ವ್ಯಾಪಕವಾದ ಅರಿವು ಮೂಡಿಸಿದರು. ಇಲ್ಲಿನ ಆಧ್ಯಾತ್ಮವನ್ನು ಆದರಿಸಿ, ಮಹಿಳೆಯರ ಜಾಗೃತಿಗಾಗಿ ತಮ್ಮನ್ನು ಅರ್ಪಿಸಿಕೊಳ್ಳುವ ಮೂಲಕ ನಮ್ಮ ದೇಶಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಅವರು ನಗರದ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಿದ್ದ ‘ಸೋದರಿ ನಿವೇದಿತಾ ಜನ್ಮದಿನಾಚರಣೆ’ಯಲ್ಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಸ್ತ್ರೀಯರಲ್ಲಿನ ಮೂಢನಂಬಿಕೆ, ಕಂದಾಚಾರ, ಅಂಧಶೃದ್ಧೆಗಳ ನಿರ್ಮೂಲನೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ವೈಜ್ಞಾನಿಕ, ವೈಚಾರಿಕತೆ ಬೆಳೆಸಲು ದುಡಿದಿದ್ದಾರೆ. ಕಲ್ಕತ್ತಾದಲ್ಲಿ ಪ್ಲೇಗ್ ರೋಗ ಹರಡಿದಾಗ ಅಪಾರವಾದ ಸೇವೆಯನ್ನು ಮಾಡಿದರು. ಸ್ವಾಮಿ ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿದ್ದ ಇವರು, ಇಡೀ ದೇಶದ ಉದ್ದಗಲಕ್ಕೂ ಸಂಚರಿಸಿ ಜನಜಾಗೃತಿ ಮೂಡಿಸಿದರು. ಭಾರತದ ಹೃದಯವನ್ನು ಅರ್ಥಮಾಡಿಕೊಂಡ ಕೆಲವು ಮಹನೀಯರಲ್ಲಿ ಇವರೊಬ್ಬರಾಗಿದ್ದಾರೆ. ಹೀಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ಸೋದರಿ ಸ್ಥಾನವನ್ನು ಪಡೆದಿದ್ದಾರೆ. ನಿವೇದಿತಾರು ಸ್ತ್ರೀಶಕ್ತಿಯ ಬಲವಾಗಿದ್ದಾರೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ರಾಜಕುಮಾರ ಬಟಗೇರಿ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ಅಮರ ಜಿ.ಬಂಗರಗಿ, ಓಂಕಾರ ಗೌಳಿ ಸೇರಿದಂತೆ ಮತ್ತಿತರರಿದ್ದರು.