ದೇಶಕ್ಕೆ ಭದ್ರ ಬುನಾದಿ ಹಾಕಿದ ನೆಹರು

ತುಮಕೂರು, ನ. ೧೭- ಪಂಚವಾರ್ಷಿಕ ಯೋಜನೆಗಳು ಮತ್ತು ಪಂಚಶೀಲ ತತ್ವಗಳ ಮೂಲಕ ಆಧುನಿಕ ಭಾರತಕ್ಕೆ ಭದ್ರ ಬುನಾದಿ ಹಾಕಿದವರು ನೆಹರು ಎಂದು ಜಿ.ಪಂ. ಸದಸ್ಯ ಕೆಂಚಮಾರಯ್ಯ ಹೇಳಿದರು.
ಮಹಾತ್ಮಗಾಂಧಿ, ನೆಹರು ಹಾಗೂ ಅಂಬೇಡ್ಕರ್ ಅವರು ಇಲ್ಲದ ಆಧುನಿಕ ಭಾರತವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಪಂಡಿತ್ ಜವಹರಲಾಲ್ ನೆಹರು ಅವರ ಜಯಂತಿ ಕಾರ್ಯಕ್ರಮದಲ್ಲಿ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮಗಾಂಧಿ ಅವರು ಹಾಕಿಕೊಟ್ಟ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೆಟ್ಟಿಲುಗಳ ಮೇಲೆ ಹಲವಾರು ಯೋಜನೆಗಳನ್ನು ರೂಪಿಸಿ, ಶಿಕ್ಷಣ, ಆಹಾರ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಭಾರತ ಮುಂದುವರೆದ ರಾಷ್ಟ್ರವಾಗಿ ಬೆಳೆಯಲು ನೆಹರು ಕೊಡುಗೆ ಅಪಾರ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಶೇ. ೧೪ ರಷ್ಟಿದ್ದ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರ ಫಲವಾಗಿ ಐಐಟಿ, ಐಐಎಂಎಸ್ ಸೇರಿದಂತೆ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ತಲೆ ಎತ್ತಿದವು. ಇವುಗಳಲ್ಲಿ ಕಲಿತ ಲಕ್ಷಾಂತರ ಜನರು ಪ್ರಪಂಚದ ವಿವಿಧೆಡೆ ನೆಲೆಸಿ, ಹಲವಾರು ಸಂಶೋಧನೆಗಳಲ್ಲಿ ತೊಡಗಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಆಧುನಿಕ ಭಾರತವನ್ನು ಭೌತಿಕವಾಗಿ ಮತ್ತು ಬೌದ್ದಿಕವಾಗಿ ಬೆಳೆಸುವಲ್ಲಿ ನೆಹರು ಶ್ರಮ ಅಪಾರ ಎಂದರು.
ನೆಹರು ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳಿಂದ ದೇಶದ ಎಲ್ಲಡೆ ನೀರಾವರಿಗೆ ಹೆಚ್ಚು ಒತ್ತು ನೀಡಿ, ಡ್ಯಾಮ್‌ಗಳು ನಿರ್ಮಾಣಗೊಂಡವು. ಭಾರತದ ಸುತ್ತಮುತ್ತಲ ರಾಷ್ಟ್ರಗಳ ಜತೆಗೆ ಉತ್ತಮ ಭಾಂಧವ್ಯ ಹೊಂದಿದ್ದ ನೆಹರು ಕಾಲವನ್ನು ಶಾಂತಿಧೂತನ ಕಾಲ ಎಂದು ಇಂದಿಗೂ ಬಣ್ಣಿಸಲಾಗುತ್ತಿದೆ. ಇಂತಹ ಭವ್ಯ ಪರಂಪರೆ ಇದ್ದ ರಾಷ್ಟ್ರದಲ್ಲಿ ಇಂದು ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು, ದ್ವೇಷ ಭಾವನೆ ಬಿತ್ತಿ, ಜನರನ್ನು ಹಿಂದೂ, ಮುಸ್ಲಿಂ ಎಂದು ವಿಂಗಡಿಸಿ ವಿದೇಶಗಳಲ್ಲಿಯೂ ತಲೆತಗ್ಗಿಸುವಂತಹ ಮಟ್ಟಕ್ಕೆ ತಂದಿರುವುದು ನಾಚಿಕೆಗೇಡಿನ ವಿಚಾರ ಎಂದರು.
ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ದೇಶದ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂಬುದನ್ನು ಮನೆ ಮನೆಗೆ ತಿಳಿಸುವ ಮೂಲಕ ಬಿಜೆಪಿ ಕೋಮುವಾದಿ ಅಜೆಂಡಾ ಜಾರಿಯಾಗದಂತೆ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆಯ ಶಾಪಕ್ಕೆ ನಾವೆಲ್ಲರೂ ಗುರಿಯಾಗಬೇಕಾದಿತು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ರೇವಣ್ಣಸಿದ್ದಯ್ಯ, ನಟರಾಜು, ಶ್ರೀನಿವಾಸ, ಪ್ರಕಾಶ್, ಸುಜಾತ, ಆಟೋರಾಜು, ಮೆಹಬೂಬ್ ಪಾಷ, ಲಕ್ಷ್ಮಣಕುಮಾರಸ್ವಾಮಿ, ಗೀತಮ್ಮ ಮತ್ತಿತರರು ಉಪಸ್ಥಿತರಿದ್ದರು.