ದೇಶಕ್ಕೆ ಬಂಕಿಮಚಂದ್ರ ಚಟರ್ಜಿ ಕೊಡುಗೆ ಅನನ್ಯ : ಡಾ.ಸಣಮನಿ

ಕಲಬುರಗಿ:ಜೂ. 26: ಬ್ರಿಟಿಷ್ ಸರ್ಕಾರದಲ್ಲಿ ನೌಕರರಾಗಿದ್ದರು ಕೂಡಾ ಅವರ ದಬ್ಬಾಳಿಕೆಯನ್ನು ವಿರೋಧಿಸಿ ತಮ್ಮದೇ ಆದ ಹರಿತವಾದ ಲೇಖನವನ್ನು ಬರೆಯುವ ಮೂಲಕ ಪ್ರತಿಯೊಬ್ಬರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿದ ಬಂಕಿಮಚಂದ್ರ ಚಟರ್ಜಿ, ಸ್ವಾತಂತ್ರ್ಯ ಹೋರಾಟಗಾರ, ಕವಿ, ಲೇಖಕ, ಪತ್ರಕರ್ತ, ಚಿಂತಕರಾಗಿ ಅವರು ನೀಡಿರುವ ಬಹುಮುಖ ಕೊಡುಗೆಯು ಅನನ್ಯವಾಗಿದೆ ಎಂದು ಕೊಹಿನೂರ ಶಿಕ್ಷಣ ಸಂಸ್ತೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ ಹೇಳಿದರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ಸ್ವಾತಂತ್ರ್ಯ ಹೋರಾಟಗಾರ, ಕವಿ, ಲೇಖಕ ‘ಬಂಕಿಮಚಂದ್ರ ಚಟರ್ಜಿಯವರ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಬಂಕಿಮಚಮದ್ರ ಚಟರ್ಜಿ ಅವರು ‘ವಂದೇ ಮಾತರಂ’ ಗೀತೆಯನ್ನು ರಚಿಸಿ ಭಾರತಿಯರೆಲ್ಲರೂ ಸ್ವಾತಂತ್ರ ಚಳುವಳಿಯಲ್ಲಿ ಧುಮುಕುವಂತೆ ಪ್ರೇರೆಪಿಸಿದರು. ‘ಆನಂದ ಮಠ’ ಎಂಬ ಬಹು ಮೌಲಿಕವಾದ ಪ್ರಸಿದ್ಧ ಕಾದಂಬರಿಯನ್ನು ರಚಿಸಿದ್ದಾರೆ. ‘ವಂಗ ದರ್ಶನ’ ಎಂಬ ಪತ್ರಿಕೆಯ ಮೂಲಕ ಜನಜಾಗೃತಿಯನ್ನುಂಟು ಮಾಡಿದರು. ಬ್ರಿಟಿಷರಿಂದ ಭಾರತಿಯರಿಗಾಗುತ್ತಿದ್ದ ಅನ್ಯಾಯವನ್ನು ಖಂಡಿಸಿ ಸರ್ಕಾರಿ ಸೇವೆಯನ್ನು ತ್ಯಜಿಸಿ ದೇಶಕ್ಕಾಗಿ ದುಡಿದ ಮಹಾನ ಚೇತನ ಚಟರ್ಜಿಯವರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ಎಸ್.ಘತ್ತರಗಿ, ಉಪನ್ಯಾಸಕಿಯರಾದ ಅಶ್ವಿನಿ ಜೆ.ಪಾಟೀಲ, ಅರ್ಚನಾ ಎಂ.ಹೀರಾಪುರ, ಪ್ರಮುಖರಾದ ಆಕಾಶ ಪಾಟೀಲ್, ರಾಶಿ ಎ.ಗುತ್ತೇದಾರ, ರಿತಿಕಾ ಗುತ್ತೇದಾರ, ವಿನಾಯಕ, ರಮಿಶಾ ಸೇರಿದಂತೆ ಮತ್ತಿತರರಿದ್ದರು.