ದೇಶಕ್ಕೆ ನೆಹರೂ ಕೊಡುಗೆ ಅಪಾರ: ಪೂಜಾರ

ಬ್ಯಾಡಗಿ, ನ 15- ದೇಶದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜಯಂತಿಯನ್ನು ಬಿಜೆಪಿ ಯುವ ಮೋರ್ಚಾ ಘಟಕದಿಂದ ಶನಿವಾರ ಆಚರಿಸಲಾಯಿತು.
ಪಟ್ಟಣದ ನೆಹರೂ ವೃತ್ತದಲ್ಲಿರುವ ಜವಾಹರಲಾಲ್ ನೆಹರೂ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಮಂಜುನಾಥ ಪೂಜಾರ, ದೇಶದ ಅಭಿವೃದ್ಧಿಗೆ ನೆಹರೂ ಅವರ ಕೊಡುಗೆ ಅಪಾರ, ಬ್ರಿಟಿಷರ ಆಳ್ವಿಕೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ದೇಶದಲ್ಲಿನ ಬಡತನ ನಿರ್ಮೂಲನೆ, ದೇಶದ ಭದ್ರತೆಗಾಗಿ ಅವರು ಕೈಗೊಂಡ ಪಂಚವಾರ್ಷಿಕ ಯೋಜನೆಗಳು, ವಿದೇಶಾಂಗ ನೀತಿಯ ನಿರ್ಣಯಗಳು ಅಭಿವೃದ್ಧಿಗೆ ಪೂರಕವಾಗಿವೆ ಎಂದರು.
ತಾಲೂಕಾ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಮುನ್ನಾ ಮಾಳಗಿಮನಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನೆಹರೂ ಅವರು ಮಹಾತ್ಮ ಗಾಂಧೀಜಿ ಅವರೊಂದಿಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ದೇಶವನ್ನು ಬಿಡುಗಡೆ ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ದೇಶದ ಸ್ವಾತಂತ್ರ್ಯ ಸಿಕ್ಕ ನಂತರ ಪ್ರಪ್ರಥಮ ಪ್ರಧಾನ ಮಂತ್ರಿಯಾಗಿ ನೆಹರೂ ಅವರು ಆಯ್ಕೆಯಾಗುವ ಮೂಲಕ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಶಿವಯೋಗಿ ಗಡಾದ. ಪರಶುರಾಮ ಉಜನಿಕೊಪ್ಪ, ಸುರೇಶ ಹೊಸಮನಿ, ರಮೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು