ದೇಶಕ್ಕೆ ನಂ.1 ಜಿಲ್ಲೆಯಾಗಿಸಲು ಸಂಕಲ್ಪ ಮಾಡೋಣ-ವೆಂಕಟ್‌ರಾಜಾ

ಕೋಲಾರ,ಮಾ,೨೫- ಕೋಲಾರದಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಯುಗಾದಿ ಉತ್ಸವ ಪ್ರತಿ ವರ್ಷ ಆಚರಿಸುವ ಭರವಸೆ ನೀಡಿದ್ದ ಡಿಸಿಪಿ ದೇವರಾಜ್ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ, ಈ ಸಂಭ್ರಮದಲ್ಲಿ ನಾವು ಕೋಲಾರವನ್ನು ರಾಜ್ಯಕ್ಕೆ ನಂ.೧ ಆಗಿಸಲು ಸಂಕಲ್ಪ ಮಾಡೋಣ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಕರೆ ನೀಡಿದರು.
ದೇವರಾಜ್ ಸಾಮಾಜಿಕ ಕಾಳಜಿಯಿಂದ ಸ್ಥಾಪಿಸಿರುವ ಡಿಎಂಆರ್ ಫೌಂಡೇಷನ್ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ನಾಗರೀಕ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಯುಗಾದಿ ಉತ್ಸವ-೨೦೨೩ಕ್ಕೆ ಚಾಲನೆ ನೀಡಿ ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಡಿ.ದೇವರಾಜ್ ಇಲ್ಲಿಂದ ವರ್ಗವಾದರೂ ಉತ್ಸವ ಆಚರಿಸಲು ಇಲ್ಲಿಗೆ ಬಂದಿದ್ದಾರೆ, ಅವರಂತೆ ನಾನು ಮುಂದಿನ ದಿನಗಳಲ್ಲಿ ಯುಗಾದಿ ಉತ್ಸವ ಆಚರಿಸಲು ಪೂರ್ಣ ಸಹಕಾರ ನೀಡುವೆ ಎಂದು ತಿಳಿಸಿದರು.
ನಿಕಟಪೂರ್ವ ಕೋಲಾರ ಎಸ್ಪಿ ಹಾಗೂ ಹಾಲಿ ಬೆಂಗಳೂರು ಉತ್ತರ ಡಿಸಿಪಿ ಡಿ.ದೇವರಾಜ್ ಮಾತನಾಡಿ, ಮೊದಲು ಮಾನವನಾಗು ಎಂಬುದು ನನ್ನ ತತ್ವವಾಗಿದೆ, ರಾಜ್ಯದಲ್ಲಿ ಎಲ್ಲೇ ಇದ್ದರೂ ಕೋಲಾರದಲ್ಲಿ ಯುಗಾದಿ ಉತ್ಸವ ಆಚರಿಸುವುದಾಗಿ ಹೇಳಿದ್ದೆ ಅದರಂತೆ ಇಂದು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ತಮ್ಮ ತಂದೆ ತಾಯಿಯ ಹೆಸರಿನಲ್ಲಿ ಡಿಎಂಆರ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಸ್ಥಾಪಿಸಿದ್ದು, ಈಗಾಗಲೇ ಮೊದಲ ತಂಡ ಹೊರ ಬಂದಿದೆ, ಎರಡನೇ ತಂಡದ ತರಬೇತಿ ನಡೆಯುತ್ತಿದೆ, ದೆಹಲಿ ಮತ್ತಿತರ ಕಡೆ ೧.೫ ಲಕ್ಷ ಶುಲ್ಕ ನೀಡಿ ತರಬೇತಿ ಪಡೆಯಲು ಕೋಲಾರ ಜಿಲ್ಲೆಯ ಜನತೆಯಿಂದ ಸಾಧ್ಯವಿಲ್ಲ ಎಂಬುದನ್ನು ಅರಿತು ಇಲ್ಲಿ ಕೇವಲ ೫ ಸಾವಿರ ರೂ ಮೈಂಟೆನೆನ್ಸ್ ಖರ್ಚು ಪಡೆದು ತರಬೇತಿ ನೀಡಲಾಗುತ್ತಿದೆ ಎಂದರು.
ಕೋಲಾರ ಜಿಲ್ಲೆ ಹಿಂದೆ ಐಎಎಸ್,ಕೆಎಎಸ್ ಅಧಿಕಾರಿಗಳಿಗೆ ಖ್ಯಾತಿ ಪಡೆದಿತ್ತು, ಮತ್ತೆ ಆ ವೈಭವ ಮರುಕಳಿಸಬೇಕು ಎಂಬುದೇ ನನ್ನ ಆಶಯವಾಗಿದೆ, ಜಿಲ್ಲೆಯ ಯುವಕರು ಇದರ ಸದುಪಯೋಗ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ಈ ಉತ್ಸವಕ್ಕೆ ಪೂರ್ಣ ಸಹಕಾರ ನೀಡಿದ ಸಚಿವ ಮುನಿರತ್ನ ಅವರಿಗೆ ಧನ್ಯವಾದ ಸಲ್ಲಿಸಿದ ಅವರು, ಈ ಬಾರಿ ಕೆಎಲ್‌ವಿ ಪ್ರಾಜೆಕ್ಟ್ಸ್, ಲಿಟಲ್ ಪ್ರೊಡಿಜೀಸ್ ಇಂಟರ್ ನ್ಯಾಷನಲ್ ಶಾಲೆ, ಝೀಲಾಗ್ ಲಾಜಿಸ್ಟಿಕ್ಸ್ ಪ್ರೈ.ಲಿಮಿಟೆಡ್ ಕಂಪನಿಗಳು ಉತ್ಸವಕ್ಕೆ ಪ್ರಾಯೋಜಕತ್ವ ನೀಡಿದ್ದು, ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.