
ಕಲಬುರಗಿ:ಸೆ.4: ದೇಶದ ಸ್ವಾತಂತ್ರ್ಯಕ್ಕೆ ನಿರಂತರವಾಗಿ ಶ್ರಮಿಸಿದ, ಬ್ರೀಟಿಷ ವಸಾಹತುಶಾಹಿಯಲ್ಲಿ ಭಾರತದ ಸಂಪತ್ತು ಬ್ರೀಟನ್‍ಗೆ ಹರಿದು ಹೋಗುವ ಪರಿಯನ್ನು ತೋರಿಸಿದ ಆರ್ಥಿಕ ಚಿಂತಕ, ಅಪ್ಪಟ ದೇಶಾಭಿಮಾನಿಯಾಗಿ ದೇಶಕ್ಕೆ ದಾದಾಬಾಯಿ ನವರೋಜಿಯವರು ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ‘ದಾದಾಬಾಯಿ ನವರೋಜಿ ಜನ್ಮ ದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ ಮೊದಲ ಭಾರತೀಯ, ಪ್ರಖ್ಯಾತ ಲೇಖಕ, ‘ಗ್ರಾಂಡ್ ಓಲ್ಡ್ ಮ್ಯಾನ್ ಆಪ್ ಇಂಡಿಯಾ’ದ ಲೇಖಕರಾದ ನವರೋಜಿಯವರು ನಮ್ಮ ದೇಶಕ್ಕೆ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ. ಯುವಶಕ್ತಿ ಇಂತಹ ಮಹಾನ ಚೇತನಗಳ ಬಗ್ಗೆ ತಿಳಿದುಕೊಂಡು ದೇಶ ಸೇವೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯಾಂಕಾ ದೋಟಿಕೊಳ್ಳ, ಸಾನಿಯಾ ಶೇಖ್, ಪ್ರಮುಖರಾದ ಗುರುರಾಜ ಗುಡ್ಡಾ, ಚನ್ನವೀರ ಹಿರೇಮಠ, ಅನಿಲ ಗೌಳಿ, ನಾಗರಾಜ ಹಡಪದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.