ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದವರು


ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.12: ಭಾರತ ಸಂವಿಧಾನದ 352ನೇ ವಿಧಿ ಅನ್ವಯ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಸಲಹೆಯಂತೆ 25ನೇ ಜೂನ್ 1975 ರ ಮಧ್ಯ ರಾತ್ರಿಯಿಂದ 21ನೇ ಮಾರ್ಚ್ 1977 ರ ವರೆಗೆ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಆಂತರಿಕ ತುರ್ತು ಪರಿಸ್ಥಿತಿ ಹೇರಿದವರು ಐದನೇ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಜೀವನ ಸಾಧನೆ ಪರಿಚಯ ಹಾಗೂ ಶಾಲೆಯ ಸ್ವಚ್ಛತೆ ಕಡೆ ಸದಾ ಆಸಕ್ತಿ ವಹಿಸುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು 1976 ರಲ್ಲಿ ಸಂವಿಧಾನದ 42ನೇ ತಿದ್ದುಪಡಿ ತಂದು ಮೂಲಭೂತ ಕರ್ತವ್ಯಗಳನ್ನು ಅನುಷ್ಠಾನಕ್ಕೆ ತಂದದ್ದು ಇವರ ಅವಧಿಯಲ್ಲಿ ಎಂದು ಹೇಳಿದರು. ಆದ್ದರಿಂದ ವಿದ್ಯಾರ್ಥಿಗಳು ಭಾರತ ಸಂವಿಧಾನದಲ್ಲಿನ ಪ್ರಸ್ತಾವನೆ, ವಿಧಿಗಳ ಬಗ್ಗೆ ಪ್ರಾಥಮಿಕ ಹಂತದಲ್ಲೇ ಸರಿಯಾಗಿ ತಿಳಿದು ಕೊಳ್ಳಬೇಕೆಂದು ಹೇಳಿದರು.
ಎಂಟನೇ ತರಗತಿಯ ಗೋವರ್ಧನ, ತರುಣ,ವಿಜಯ, ಗಣೇಶ, ಜ್ಯೋತಿ, ಉಮ,ಸಂಗೀತ ಅವರಿಗೆ ಬಹುಮಾನ ನೀಡಲಾಯಿತು.
ಶಿಕ್ಷಕರಾದ ಮುನಾವರ ಸುಲ್ತಾನ, ದಿಲ್ಷಾದ್ ಬೇಗಂ, ಮೋದಿನ್ ಸಾಬ್, ಚನ್ನಮ್ಮ, ಸುಧಾ, ಉಮ್ಮೆಹಾನಿ, ಶಶಮ್ಮ, ವಿದ್ಯಾರ್ಥಿ ಪ್ರತಿನಿಧಿ ಮಹೇಶ, ಮನೋಹರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

One attachment • Scanned by Gmail